ಚನ್ನಪಟ್ಟಣ: ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಭಾರತ್ ವಿಕಾಸ್ ಪರಿಷದ್ ಕಣ್ವ ಶಾಖೆ, ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್, ಡಾ. ರಾಜ್ ಕಲಾ ಬಳಗ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು.
ಶಿಬಿರದ ವೇಳೆ ಹಲವಾರು ಮಂದಿ ತಪಾಸಣೆಗೆ ಒಳಗಾದರು. ಹಲವು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಗಾಯಕರಾದ ಗೋವಿಂದಳ್ಳಿ ಶಿವಣ್ಣ, ಚೌ.ಪು. ಸ್ವಾಮಿ ಇತರರು ರಾಜ್ ಕುಮಾರ್ ಅವರ ಅವರ ಗೀತೆಗಳ ಗಾಯನ ನಡೆಸಿಕೊಟ್ಟರು. ಕಲಾವಿದ ದತ್ತಾತ್ರೇಯ ಡಾ. ರಾಜ್ ಕುಮಾರ್ ಅಭಿನಯದ ಚಲನ ಚಿತ್ರಗಳ ಹೆಸರುಗಳನ್ನು ಪಟಪಟ ಹೇಳುವ ಮೂಲಕ ಗಮನ ಸೆಳೆದರು.
ಡಾ. ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾವಿಪ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕನ್ನಡ ನಾಡು ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಸ್ಮರಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ. ರಾಜ್ ಅವರ ಅತ್ಯುತ್ತಮ ಅಭಿನಯ, ಹಿನ್ನೆಲೆ ಗಾಯನ, ಸ್ಪಷ್ಟ ಕನ್ನಡ ಮಾತುಗಳು ಮತ್ತು ಕನ್ನಡ ಪರ ಕಾಳಜಿಯಿಂದ ರಾಜ್ಯದ ಕೀರ್ತಿ ಪತಾಕೆಯನ್ನು ದೇಶದ ಉದ್ದಗಲಕ್ಕೆ ಪಸರಿಸಿದ್ದಾರೆ ಎಂದರು.
ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಸಂಸ್ಥಾಪಕ ವಿ.ಸಿ. ಚಂದ್ರೇಗೌಡ, ಡಾ. ರಾಜ್ ಕಲಾಬಳಗದ ಅಧ್ಯಕ್ಷ ಎಲೆಕೇರಿ ಮಂಜುನಾಥ್ ಮಾತನಾಡಿದರು.
ಭಾವಿಪ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ಖಜಾಂಚಿ ವಿ.ಟಿ. ರಮೇಶ್, ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಚಕ್ಕೆರೆ ವಿಜೇಂದ್ರ, ಭಾರತ ಸೇವಾದಳದ ಅಧ್ಯಕ್ಷ ಗೋವಿಂದಯ್ಯ, ಅಮ್ ಫೌಂಡೇಶನ್ ಅಧ್ಯಕ್ಷ ಬಿ.ಎನ್. ಕಾಡಯ್ಯ, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರಾಂಪುರ ಧರಣೇಶ್, ಪೂರ್ಣಗಿರಿ ಕೃಷ್ಣಪ್ಪ, ಟಿ.ಚೆನ್ನಪ್ಪ, ಕರಿಯಪ್ಪ, ಜಿ.ಕೆ.ರಂಗನಾಥ್, ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.