ADVERTISEMENT

ಮಕ್ಕಳ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೂಗು

ಸರ್ಕಾರಿ ಶಾಲೆ ಉಳಿಸಲು ಒತ್ತಾಯ: ಕನ್ನಡ ಬಳಕೆ ಹೆಚ್ಚಿಸುವತ್ತ ವಿದ್ಯಾರ್ಥಿಗಳ ಒಲವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 4:46 IST
Last Updated 22 ಫೆಬ್ರುವರಿ 2026, 4:46 IST
ಕುದೂರಿನಲ್ಲಿ ನಡೆದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ಕುದೂರಿನಲ್ಲಿ ನಡೆದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಪ್ರಜಾವಾಣಿ ವಾರ್ತೆ

ಕುದೂರ: ಹೆಣ್ಣು ಮಕ್ಕಳಿಗೆ ಸಮಾನತೆ, ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂಟನೇ ತರಗತಿಯ ಛಾಯಾ ಅಭಿಪ್ರಾಯಪಟ್ಟರು.

ಕುದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಸ್ಥಾನಮಾನ ಸಿಗುವಂತಾಗಲಿ ಎಂದು ಆಶಿಸಿದರು.

ADVERTISEMENT

ಕುದೂರು ಕರ್ನಾಟಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿಷ್ಣು ವಲ್ಲಭ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿ, ಕೇವಲ ಪಠ್ಯಪುಸ್ತಕ ಓದಿ ಅಂಕಗಳಿಸಿದರೆ ಕನ್ನಡ ಭಾಷೆ ಅಭಿವೃದ್ಧಿ ಆಗುವುದಿಲ್ಲ. ಕಥೆ, ಕವನ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯವನ್ನು ಓದಬೇಕು ಎಂದರು.

ಸಾಕಷ್ಟು ವಿದ್ಯಾರ್ಥಿಗಳು ಸಹಿಯನ್ನು ಇಂಗ್ಲಿಷ್‌ನಲ್ಲಿ ಹಾಕುತ್ತಿದ್ದಾರೆ. ಕನ್ನಡದಲ್ಲಿ ಸಹಿ ಹಾಕುವುದನ್ನು ರೂಢಿಸಿಕೊಳ್ಳಿ. ದಿನನಿತ್ಯ ಕನ್ನಡ ಪದಗಳ ಬಳಕೆ ಹೆಚ್ಚಾಗಲಿ ಎಂದರು.

ಸುಗ್ಗನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ತನ್ಯಶ್ರೀ, ಕನ್ನಡಿಗರಿಗೆ, ಕನ್ನಡ ಶಾಲೆಯಲ್ಲಿ ಓದಿದವರಿಗೆ ಬೆಂಗಳೂರು ದಕ್ಷಿಣ, ರಾಮನಗರ ಜಿಲ್ಲೆಯ ಸುತ್ತಮುತ್ತಲ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಕೊಡಿಸಲೇಬೇಕು ಎಂದು ಒತ್ತಾಯ ಮಾಡಿದರು.

ಆನ್‌ಲೈನ್‌, ವೆಬ್‌ಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡಲಾಗಿದೆ. ಭಾಷಾ ತರ್ಜಮೆಗೂ ಅವಕಾಶ ನೀಡಲಾಗಿದೆ. ಜನಪ್ರತಿನಿಧಿಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂದು ಹೇಳಿದರು.

4ನೇ ತರಗತಿ ವಿದ್ಯಾರ್ಥಿನಿ ರಚನಾ ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡು ಹಲವು ವಸ್ತುಗಳನ್ನು ಗುರುತಿಸುವ ಜತೆಗೆ ಪುಸ್ತಕ ಓದಿ ಎಲ್ಲರನ್ನೂ ಅಚ್ಚರಿಗೊಳಿಸಿದಳು.

ಪಟ್ಟಣದ ರಾಜಬೀದಿಗಳಲ್ಲಿ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್, ಜಾನಪದ ಕಲಾತಂಡಗಳು ಹಾಗೂ ಕನ್ನಡ ಘೋಷವಾಕ್ಯಗಳೊಂದಿಗೆ ಸಮ್ಮೇಳನ ಅಧ್ಯಕ್ಷರು ಮತ್ತು ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು.

ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ 
ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಮಲ್ಲಗಂಬ ಸಾಹಸ

ಸಮ್ಮೇಳನದ ನಿರ್ಣಯಗಳು...

* ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿ.

*ಕನ್ನಡ ಮಾಧ್ಯಮದ ಮಕ್ಕಳಿಗೆ ಕೃಪಾಂಕ ಹೆಚ್ಚಿಸಲಿ. *ಸುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಶೇ 80ರಷ್ಟು ಉದ್ಯೋಗ ಕನ್ನಡ ಮಾಧ್ಯಮದವರಿಗೆ ಮೀಸಲಿಡಲಿ.

*ಕನ್ನಡ ಶಾಲೆಗಳಿಗೆ ಹೈ–ಟೆಕ್ ಸ್ಪರ್ಷವಾಗಲಿ. *ಕನ್ನಡ ಮಾತನಾಡಿದರೆ ದಂಡ ಹಾಕುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಸೂಕ್ತ ನಿರ್ಣಯವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.