
ರಾಮನಗರ: ಜಗತ್ತಿಗೆ ಶಾಂತಿಯ ಮಂತ್ರ ಸಾರಿದ ಶಾಂತಿಧೂತ ಯೇಸು ಜನ್ಮದಿನದ ಪ್ರಯುಕ್ತ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ನಗರದಲ್ಲಿ ಗುರುವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.
ಚರ್ಚ್‌ಗಳಿಗೆ ಬೆಳಗ್ಗೆಯೇ ಕುಟುಂಬ ಸಮೇತ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ವಿಶೇಷ ಸಂದೇಶ ನೀಡಿದರು.
ಬುಧವಾರ ಮಧ್ಯರಾತ್ರಿಯೂ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. ಯೇಸುವನ್ನು ಕೊಂಡಾಡುವ ದೇವಸ್ತುತಿ ಗೀತೆಗಳು ಅನುರಣಿಸಿದವು. ಗುರುವಾರ ಬೆಳಗ್ಗೆ 8ರ ಸುಮಾರಿಗೆ ಚರ್ಚ್‌ಗೆ ಹೊಸ ಧಿರಿಸಿನಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದರು. ಪ್ರೀತಿ ಪಾತ್ರರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಧರ್ಮಗುರುಗಳ ಆಶೀರ್ವಚನ ಕೇಳಿ ಆಶೀರ್ವಾದ ಪಡೆದರು.
ನಗರದ ರೈಲು ನಿಲ್ದಾಣದ ಬಳಿ ಇರುವ ಲೂರ್ದು ಮಾತೆ ದೇವಾಲಯದಲ್ಲಿ ಫಾದರ್ ಲೂರ್ದು ಭಾಸ್ಕರ್ ಅವರು ಹಬ್ಬದ ವಿಶೇಷ ಸಂದೇಶ ನೀಡಿದರು. ಚರ್ಚ್‌ನಲ್ಲಿ ಸೇರಿದ್ದವರಿಗೆ ಶುಭಾಶಯ ಕೋರಿದರು. ಬಳಿಕ ಎಲ್ಲರಿಗೂ ಎಲ್ಲರಿಗೂ ಕೇಕ್ ವಿತರಿಸಲಾಯಿತು. ರೈಲು ನಿಲ್ದಾಣದ ರಸ್ತೆಯಲ್ಲಿರುವ ಸಂತ ತೋಮ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಜರುಗಿತು.
ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಿದ್ದ ಚಿಣ್ಣರು ಗಮನ ಸೆಳೆದರು. ಸಾಂಟಾಕ್ಲಾಸ್ ವೇಷಧಾರಿಗಳು ಉಡುಗೊರೆ ಮತ್ತು ಚಾಕಲೇಟ್ ವಿತರಿಸಿದರು. ಚರ್ಚ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ಕಣ್ತುಂಬಿಕೊಂಡರು. ಮಕ್ಕಳು ಹಾಗೂ ಯುವಜನರು ಚರ್ಚ್ ಮತ್ತು ಗೋದಲಿ ಎದುರು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರ ಮನೆಗಳು ಹಾಗೂ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ನಕ್ಷತ್ರ ಬುಟ್ಟಿಗಳು, ಕ್ರಿಸ್‌ಮಸ್ ಟ್ರೀಗಳು ಹಾಗೂ ಸಾಂಟಾ ಕ್ಲಾಸ್ ಬೊಂಬೆ ಗಮನ ಸೆಳೆದವು.
ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ತೆರಳಿದ ಬಳಿಕ ಮಧ್ಯಾಹ್ನ ಹಬ್ಬದೂಟ ಸವಿದರು. ನೆಂಟರು, ಸ್ನೇಹಿತರು ಹಾಗೂ ನೆರೆಹೊರೆಯವರಿಗೂ ಕೇಕ್ ಹಾಗೂ ಹಬ್ಬದ ಖಾದ್ಯಗಳನ್ನು ನೀಡಿದರು.
ಅಧ್ಯಕ್ಷರಿಂದ ಶುಭಾಶಯ: ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಲೂರ್ದು ಚರ್ಚ್‌ಗೆ ಬೆಳಿಗ್ಗೆ ಭೇಟಿ ನೀಡಿ ಕ್ರಿಸ್‌ಮಸ್ ಶುಭಾಶಯ ಕೋರಿದರು. ನಗರಸಭೆ ಸದಸ್ಯ ಗ್ಯಾಬ್ರಿಯಲ್, ಜೇಮ್ಸ್ ಕುಮಾರ್, ಮೋಹನ್ ಇದ್ದರು.
ಈ ಜಗತ್ತಿನಲ್ಲಿ ನೆಲೆಸಿದ್ದ ಅಶಾಂತಿ ಮತ್ತು ಹಿಂಸೆಗೆ ಪ್ರತಿಯಾಗಿ ಶಾಂತಿ ಪ್ರತಿಷ್ಠಾಪಿಸಲು ಯೇಸು ಅವರು ಜನ್ಮ ತಾಳಿದರು. ಜಗತ್ತಿನ ನೆಮ್ಮದಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟರು. ಅವರು ಜನಿಸಿದ ಈ ಸುದಿನದಂದು ನಾವೆಲ್ಲರೂ ಶಾಂತಿ ಮತ್ತು ಸೌಹಾರ್ದಕ್ಕಾಗಿ ಪ್ರಾರ್ಥಿಸಬೇಕು. ನಮ್ಮ ನೆರೆಹೊರೆಯವರೊಂದಿಗೆ ಶಾಂತಿ ಮತ್ತು ಸಂತೋಷ ಹಂಚಿಕೊಳ್ಳಬೇಕು. ಅಸಹಾಯಕರಿಗೆ ನೆರವಾಗಬೇಕು. ಜಗತ್ತಿನ ಶಾಂತಿಗಾಗಿ ಎಲ್ಲರೂ ಶ್ರಮಿಸಬೇಕು’ ಎಂದು ಲೂರ್ದು ಚರ್ಚ್‌ನ ಫಾದರ್ ಲೂರ್ದು ಭಾಸ್ಕರ್ ಅವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಧರ್ಮ ಸಂದೇಶ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.