
ರಾಮನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಹಾಗೂ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರದ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ರಾಮನಗರ ಶಾಖೆ ಅಧ್ಯಕ್ಷ ದೇವೇಂದ್ರ ಹಾಗೂ ಇತರರು ಇದ್ದಾರೆ
ರಾಮನಗರ: ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆರು ತಿಂಗಳ ಹಿಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಸರ್ಕಾರ ಕೊಟ್ಟ ಮಾತಿನಂತೆ ತಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮತ್ತೆ ರಾಜ್ಯದಾದ್ಯಂತ ಮುಷ್ಕರ ಆರಂಭಿಸಿದೆ.
ಈ ಕುರಿತು ನಗರಸಭೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ‘ವಿವಿಧ ಬೇಡಿಕೆ ಈಡೇರಿಕೆಗಾಗಿ ಸಂಘವು ಮೇ ತಿಂಗಳಲ್ಲಿ ಮುಷ್ಕರ ನಡೆಸಿತ್ತು. ಆಗ ಸರ್ಕಾರ ಸಂಘದ ಜೊತೆ ಸಭೆ ನಡೆಸಿ, ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮರೆಯಿತು. ಅನಿವಾರ್ಯವಾಗಿ ನಾವು ಮತ್ತೆ ಮುಷ್ಕರದ ಹಾದಿ ಹಿಡಿಯಬೇಕಾಗಿದೆ’ ಎಂದರು.
ಸಭೆ ನಡೆಸಿದ್ದ ಸಚಿವ: ‘ಹಿಂದೆ ಮುಷ್ಕರ ನಡೆಸಿದ್ದಾಗ ಪೌರಾಡಳಿತ ಸಚಿವ ರಹೀಂ ಖಾನ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಸಂಘದ ರಾಜ್ಯದಾಧ್ಯಕ್ಷ ಕೆ. ಪ್ರಭಾಕರ್ ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು’ ಎಂದು ಹೇಳಿದರು.
‘ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದ ಸಚಿವರು, ಕೆಲ ಬೇಡಿಕೆಗಳ ಈಡೇರಿಕೆಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ. ಹಾಗಾಗಿ, 3 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ದೀರ್ಘ ಕಾಲಾವಧಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಒಂದು ತಿಂಗಳು ಕಾಲಾವಕಾಶ ಕೇಳಿದ್ದರು. ಅದಾಗಿ 6 ತಿಂಗಳಾದರೂ ಬೇಡಿಕೆಗಳು ಮಾತ್ರ ಈಡೇರಿಲ್ಲ’ ಎಂದರು.
ಎಲ್ಲಾ ಕೆಲಸ ಸ್ಥಗಿತ: ‘ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೌಕರರು ಕರ್ತವ್ಯಕ್ಕೆ ಗೈರಾಗಲಿದ್ದಾರೆ. ಹಾಗಾಗಿ ತ್ಯಾಜ್ಯ ಸಂಗ್ರಹಣೆ, ಕಸ ತೆರವು, ಒಳ ಚರಂಡಿ ಸ್ವಚ್ಛತೆ ಮತ್ತು ನಿರ್ವಹಣೆ, ಯುಜಿಡಿ ಕೆಲಸ ಹಾಗೂ ಕಚೇರಿ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಕಚೇರಿಗಳ ಮುಂದೆ ನೌಕರರು ಅನಿರ್ದಿಷ್ಟಾವಧಿ ಧರಣಿ ಕೂರಲಿದ್ದಾರೆ’ ಎಂದು ತಿಳಿಸಿದರು.
‘ಮುಷ್ಕರಿಂದ ಜನರಿಗೆ ತೊಂದರೆಯಾದರೂ, ನ್ಯಾಯಯುತ ಬೇಡಿಕೆಗಳಿಗಾಗಿ ನಾವು ಕರ್ತವ್ಯಕ್ಕೆ ಮುಷ್ಕರ ನಡೆಸದೆ ಬೇರೆ ಮಾರ್ಗವಿಲ್ಲ. ಡಿ. 8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರವಾಗಿ ದನಿ ಎತ್ತಿ ನ್ಯಾಯ ಒದಗಿಸುವಂತೆ, ಈಗಾಗಲೇ ವಿರೋಧ ಪಕ್ಷದ ನಾಯಕರು ಹಾಗೂ ಎಲ್ಲಾ ಸ್ಥಳೀಯ ಶಾಸಕರಿಗೂ ಸಂಘದಿಂದ ಮನವಿ ಸಲ್ಲಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ರಾಮನಗರ ಶಾಖೆ ಅಧ್ಯಕ್ಷ ದೇವೇಂದ್ರ, ಪ್ರಧಾನ ಕಾರ್ಯದರ್ಶಿ ಕೊಲ್ಲಾಪುರಿ, ಗೌರವಾಧ್ಯಕ್ಷ ನಟರಾಜೇಗೌಡ, ಮುಖಂಡರಾದ ರಾಮಣ್ಣ, ಪಿ. ನರಸಿಂಹ, ರಾಮಸಂಜೀವಯ್ಯ, ಕೆ.ಎಸ್. ನಾಗರಾಜ್, ಮುತ್ತಣ್ಣ, ಧನಲಕ್ಷ್ಮಿ ಹಾಗೂ ಇತರರು ಇದ್ದರು.
ಎ.ಸಿ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಸರ್ಕಾರ ನಗದು ರಹಿತ ಚಿಕಿತ್ಸೆ ಸೌಲಭ್ಯ ಕೊಡುತ್ತದೆ. ಆದರೆ ಮಳೆ ಗಾಳಿ ಬಿಸಿಲು ಸಾಂಕ್ರಾಮಿಕ ರೋಗಗಳನ್ನು ಲೆಕ್ಕಿಸದೆ ಕೆಲಸ ಮಾಡುವವರಿಗೆ ಕೊಡಲು ಮೀನಮೇಷ ಎಣಿಸುತ್ತಿದೆ –ಆರ್. ನಾಗರಾಜು ರಾಜ್ಯ ಉಪಾಧ್ಯಕ್ಷ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.