ADVERTISEMENT

ರಾಮನಗರ| ಸಿಜೆಐ ಪ್ರಕರಣ ಸಂವಿಧಾನದ ಮೇಲಿನ ದಾಳಿಗೆ ಸಮ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:16 IST
Last Updated 14 ಅಕ್ಟೋಬರ್ 2025, 2:16 IST
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿರುವ ಘಟನೆ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ರಾಮನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿರುವ ಘಟನೆ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ರಾಮನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು   

ರಾಮನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿರುವ ಘಟನೆ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ತಮಟೆ ಬಾರಿಸಿ ಆಕ್ರೋಶ ಹೊರ ಹಾಕಿದರು. ವಕೀಲ ರಾಕೇಶ್ ಕಿಶೋರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ವಕೀಲನ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಶಿವಕುಮಾರಸ್ವಾಮಿ, ‘ಸಿಜೆಐ ಅವರತ್ತ ವಕೀಲ ಶೂ ಎಸೆಯಲು ಯತ್ನಿಸಿರುವ ಘಟನೆಯು, ದೇಶದ ಸಂವಿಧಾನ ಮತ್ತು ನ್ಯಾಯಾಂಗದ ಮೇಲಿನ ದಾಳಿಗೆ ಸಮವಾಗಿದೆ. ಇದು ಸನಾತನ ಧರ್ಮದ ಹೆಸರಿನಲ್ಲಿ ಮೆರೆದಿರುವ ವಿಕೃತಿ. ಇದರ ಹಿಂದೆ ಕೋಮುವಾದ ಮತ್ತು ಜಾತಿವಾದವಿದೆ’ ಎಂದರು.

ADVERTISEMENT

‘ದಲಿತರೊಬ್ಬರು ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿರುವುದನ್ನು ಮನುವಾದಿಗಳಿಗೆ ಸಹಿಸಲಾಗುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಶೋಷಿತರನ್ನು ಇಂದಿಗೂ ಜಾತಿ ಮನಸ್ಥಿತಿಯಲ್ಲೇ ನೋಡುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಶಂಕರ್ ಮಾತನಾಡಿ, ‘ದಾಳಿ ಮಾಡಿದ ವಕೀಲನ ವಿರುದ್ಧ ದೆಹಲಿಯಲ್ಲಿರುವ ಬಿಜೆಪಿ ಸರ್ಕಾರ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕಿತ್ತು. ಆದರೆ, ಸರ್ಕಾರ ಇದುವರೆಗೆ ಅಂತಹ ದಿಟ್ಟ ಕ್ರಮವನ್ನು ತೋರಿಸಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಹೆಚ್ಚಾಗುತ್ತಿದೆ. ಇಂತಹ ಶಕ್ತಿಗಳನ್ನು ಮಟ್ಟಹಾಕಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ’ ಎಂದರು.

ಸಂಘಟನೆ ಮುಖಂಡರಾದ ಅಪ್ಪಗೆರೆ ಶ್ರೀನಿವಾಸ್, ವಕೀಲ ವರದರಾಜು, ಲೋಕೇಶ್, ರಾಮನಗರ ಸುರೇಶ್, ಸಿದ್ದರಾಜು, ಚನ್ನಪಟ್ಟಣ ಕುಮಾರ್, ಪುನೀತ್, ವಿನಯ್, ಹೊಂಬಾಳಯ್ಯ, ಸಿದ್ದರಾಮು, ಪ್ರದೀಪ್, ಅಪ್ಪಾಜಿ, ವಕೀಲ ಮುರಳಿ, ಲೋಕೇಶ್, ಶಿವಣ್ಣ, ಕೆಂಗಲ್ಲಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.