ADVERTISEMENT

ಚನ್ನಪಟ್ಟಣ | ಪ್ರತಿ ಎಕರೆಗೆ ₹10 ಸಾವಿರ ಪರಿಹಾರ: ಎಚ್.ಡಿ.ಕುಮಾರಸ್ವಾಮಿ

ಸರ್ಕಾರದ ಪರಿಹಾರ ಜತೆಗೆ ವೈಯಕ್ತಿಕವಾಗಿಯೂ ನೆರವು ಘೋಷಿಸಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:16 IST
Last Updated 19 ಮೇ 2020, 14:16 IST
ಚನ್ನಪಟ್ಟಣ ತಾಲ್ಲೂಕಿನ ಗೋವಿಂದಹಳ್ಳಿ ಗ್ರಾಮಕ್ಕೆ ಶಾಸಕ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು
ಚನ್ನಪಟ್ಟಣ ತಾಲ್ಲೂಕಿನ ಗೋವಿಂದಹಳ್ಳಿ ಗ್ರಾಮಕ್ಕೆ ಶಾಸಕ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು   

ಚನ್ನಪಟ್ಟಣ: ಬಿರುಗಾಳಿ ಮಳೆಯಿಂದ ತಾಲ್ಲೂಕಿನಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಪ್ರಕೃತಿ ವಿಕೋಪ ನಿಧಿ ಪರಿಹಾರದ ಜತೆಗೆ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಲಾಗಿದೆ. ಇದರ ಜತೆಗೆ ವೈಯಕ್ತಿಕವಾಗಿ ಪ್ರತಿ ಎಕರೆಗೆ ₹10 ಸಾವಿರ ಪರಿಹಾರ ನೀಡುವುದಾಗಿ ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬೆಳೆ ಹಾನಿಗೊಳಗಾದ ಗೋವಿಂದಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಕೃತಿ ವಿಕೋಪನಿಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹18 ಸಾವಿರ ಪರಿಹಾರ ನೀಡುವ ನಿಯಮ ಇದೆ. ಆದರೆ, ಆ ಪರಿಹಾರ ನಿಜಕ್ಕೂ ಕಡಿಮೆ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ರೈತರಿಗೆ ಕನಿಷ್ಠ ₹80ರಿಂದ 1ಲಕ್ಷ ಖರ್ಚಾಗುತ್ತದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೆಚ್ಚು ಪರಿಹಾರ ನೀಡುವಂತೆ ಚರ್ಚಿಸಲಾಗಿದೆ. ಹೂವು ಬೆಳೆಗಾರರಿಗೆ ₹25 ಸಾವಿರ ಪರಿಹಾರ ಘೋಷಣೆ ಮಾಡಿರುವಂತೆ ಇದಕ್ಕೂ ಪರಿಹಾರ ನೀಡಬೇಕು ಎಂದರು.

ತಾಲ್ಲೂಕಿನಲ್ಲಿ ಸುಮಾರು 180ಎಕರೆ ಪ್ರದೇಶದಲ್ಲಿ ಬಾಳೆ ನಾಶವಾಗಿದೆ. 2 ಸಾವಿರ ತೆಂಗು ನೆಲಕಚ್ಚಿದೆ. 450 ಮಾವಿನಮರಗಳು ಧರೆಗುರುಳಿವೆ. 65ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಕೆಲ ರೈತರು ಸಾಲ ಮಾಡಿ ಕೃಷಿಯಲ್ಲಿ ತೊಡಗಿದ್ದಾರೆ. ಕೆಲವರು ಭೋಗ್ಯಕ್ಕೆ ಪಡೆದು ಕೃಷಿ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ ಸುಮಾರು ₹8ರಿಂದ 10ಲಕ್ಷ ನಷ್ಟವಾಗಿದೆ. ಹಿಂದಿನ ಸರ್ಕಾರದಲ್ಲಿ ತೆಂಗು ಬೆಳೆಗೆ ಎಕರೆಗೆ ₹ 20 ಸಾವಿರ ಪರಿಹಾರ ಕೊಡಲಾಗಿತ್ತು. ಅದನ್ನು ಈ ಸರ್ಕಾರವೂ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಉಭಯ ನಾಯಕರು ಹಾನಿಗೊಳಗಾಗಿರುವ ತಾಲ್ಲೂಕಿನ ಮುದಗೆರೆ, ಬೆಳಕೆರೆ, ಕೋಲೂರು, ಸೀಬನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ, ಸದಸ್ಯರಾದ ಎಸ್.ಗಂಗಾಧರ್, ಪ್ರಸನ್ನ, ಸಿ.ಪಿ.ರಾಜೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ನಗರ ಘಟಕದ ಅಧ್ಯಕ್ಷ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಆರ್.ನವ್ಯಶ್ರೀ, ಚಂದ್ರಸಾಗರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.