ADVERTISEMENT

ರಾಜ್ಯಪಾಲರಿಗೆ ಅಡ್ಡಿ: ಕಾಂಗ್ರೆಸ್‌ ಶಾಸಕರ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 2:50 IST
Last Updated 25 ಜನವರಿ 2026, 2:50 IST
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಬಸವನಪುರ, ಚಂದ್ರಶೇಖರ್, ಶಿವಮುತ್ತು ಇದ್ದರು
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಬಸವನಪುರ, ಚಂದ್ರಶೇಖರ್, ಶಿವಮುತ್ತು ಇದ್ದರು   

ಪ್ರಜಾವಾಣಿ ವಾತೆ೯

ರಾಮನಗರ: ವಿಧಾನ ಮಂಡಳ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಕರ್ತವ್ಯಕ್ಕೆ ಅಡ್ಡಿಪಡಿಸಿ ಗೂಂಡಾಗಳಂತೆ ವರ್ತಿಸಿದ ಕಾಂಗ್ರೆಸ್ ಶಾಸಕರನ್ನು ಅಮಾನತ್ತು ಮಾಡಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣಾ) ಕಾಯ್ದೆ (ವಿಬಿ-ಜಿ-ರಾಮ್ ಜಿ) ಜಾಗೃತಿ ಸಮಾವೇಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವರ್ಷದ ಮೊದಲ ಅಧಿವೇಶನದ ವೇಳೆ ರಾಜ್ಯ ಸರ್ಕಾರ ಕೇಂದ್ರದ ಜನಪರ ಯೋಜನೆಯನ್ನು ವಿರೋಧಿಸಲು ರಾಜ್ಯಪಾಲರಿಗೆ ಭಾಷಣ ಬರೆದುಕೊಟ್ಟಿದ್ದಾರೆ. ಹಾಗಾಗಿ ಅವರು ಓದದೆ ವಾಪಾಸ್‌ ಬಂದಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಬಲವಂತವಾಗಿ ಭಾಷಣ ಓದಿಸಲು ಮುಂದಾಗಿದ್ದಾರೆ. ಇದು ಆ ಪಕ್ಷದ ಸಂಸ್ಕೃತಿ ತೋರಿಸುತ್ತದೆ ಎಂದು ಟೀಕಿಸಿದರು.

ರಾಜ್ಯಪಾಲರನ್ನು ಅಡ್ಡಗಟ್ಟಿ ಅವರ ಮೇಲೆ ಬಲ ಪ್ರಯೋಗಿಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಈ ಹಿಂದೆ ಜಂಟಿ ಸದನದಲ್ಲಿ ಸ್ಪೀಕರ್ ಅವರನ್ನು ಅಭಿವೃದ್ಧಿ ದೃಷ್ಟಿಯಿಂದ ಪ್ರಶ್ನಿನಿಸಿದ ಬಿಜೆಪಿಯ 16 ಶಾಸಕರನ್ನು 6 ತಿಂಗಳು ಸದನದಿಂದ ಬಹಿಷ್ಕಾರ ಮಾಡಲಾಗಿತ್ತು. ಇದೇ ರೀತಿ ಕಾಂಗ್ರೆಸ್ ಸರ್ಕಾರ ತಮ್ಮ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಸಾಂವಿಧಾನಿಕವಾಗಿ ವರ್ತಿಸಿದ ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ತಕ್ಷಣ ಅಮಾನತ್ತು ಪಡಿಸಿ ಶಾಸಕಾಂಗ ಸಭೆಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ರಾಮನ ವಿರೋಧಿ: ಬ್ರಿಟಿಷರು ಸ್ಥಾಪಿಸಿದ ಕಾಂಗ್ರೆಸ್ ಶ್ರೀರಾಮನನ್ನು ವಿರೋಧಿಸುವ ಮನಸ್ಥಿತಿಯ ಪಕ್ಷ. ಆ ಪಕ್ಷದ ನಾಯಕರು, ಮುಖಂಡರು ರಾಮಚಂದ್ರನ ಹೆಸರು ಕೇಳುತ್ತಿದ್ದಂತೆಯೇ ಆಕ್ರೋಶಕ್ಕೆ ಒಳಗಾಗುತ್ತಾರೆ ಎಂದು ನಡಹಳ್ಳಿ ಟೀಕಿಸಿದರು.

ಈ ಹಿಂದಿನ ನರೇಗಾ ಯೋಜನೆಯಲ್ಲಿದ್ದ ನ್ಯೂನತೆ ತೆಗೆದುಹಾಕಿ ಹೊಸ ಕಾಯ್ದೆ ಜಾರಿಗೆ ತರಲಾಗಿದೆ. ಇದು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಿದೆ. ಜೊತೆಗೆ ವಿಬಿ-ಜಿ-ರಾಮ್ ಜಿ ಕಾಯ್ದೆಯಲ್ಲಿ ಆದ್ಯತೆ ಇರುವರಿಗೆ ಕೆಲಸ ನೀಡಲಾಗುತ್ತದೆ. ಬಯೋಮೆಟ್ರಿಕ್ ಹಾಜರಾತಿ ಜೊತೆಗೆ ವಾರಕ್ಕೊಮ್ಮೆ ಕೂಲಿ ಪಾವತಿ ಮಾಡಲಾಗುತ್ತದೆ. ಇದಕ್ಕೆ ರಾಮನ ಹೆಸರು ಇಟ್ಟರೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಬಸವನಪುರ, ಚಂದ್ರಶೇಖರ್, ಶಿವಮುತ್ತು, ತಾಲ್ಲೂಕು ಅಧ್ಯಕ್ಷ ಪಿಚ್ಚನಕೆರೆ ಜಗದೀಶ್, ನಗರ ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಪ್ರಸಾದ್ ಗೌಡ, ಹುಲವಾಡಿ ದೇವರಾಜು, ಆರ್.ವಿ.ಸುರೇಶ್, ಪದ್ಮನಾಬ್, ಜಗದೀಶ್, ಎಸ್.ಆರ್.ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT