ADVERTISEMENT

ವಿಮಾ ಕಂಪನಿಗೆ ಬಿಸಿ: ₹25 ಲಕ್ಷ ಪಾವತಿಗೆ ಸೂಚನೆ, ಸೇವಾ ನ್ಯೂನತೆಗೂ ಪರಿಹಾರ

ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ

ಓದೇಶ ಸಕಲೇಶಪುರ
Published 8 ಡಿಸೆಂಬರ್ 2023, 8:32 IST
Last Updated 8 ಡಿಸೆಂಬರ್ 2023, 8:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ನಿಯಮ ಮತ್ತು ಷರತ್ತುಗಳ ನೆಪ ಹೇಳಿ ವಿಮಾದಾರರಿಗೆ ಪರಿಹಾರ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಬಿಸಿ ಮುಟ್ಟಿಸಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ವಿಮೆ ಮೊತ್ತ ₹24,99,999 ಅನ್ನು ಶೇ 6ರಷ್ಟು ಬಡ್ಡಿಸಮೇತ 45 ದಿನದೊಳಗೆ ದೂರುದಾರರಿಗೆ ಪಾವತಿಸುವಂತೆ ಆದೇಶ ನೀಡಿದೆ.

ಕಾಲಮಿತಿಯೊಳಗೆ ವಿಮೆ ಮೊತ್ತ ಪಾವತಿಸದಿದ್ದರೆ ವಾರ್ಷಿಕ ಶೇ 9ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವವರೆಗೆ ಪಾವತಿಸಬೇಕು ಎಂದು ಆದೇಶಿಸಿರುವ ಆಯೋಗ, ದೂರುದಾರರು ಅನುಭವಿಸಿದ ಮಾನಸಿಕ ಹಿಂಸೆ, ಸೇವಾ ನ್ಯೂನತೆಗೆ ಪರಿಹಾರವಾಗಿ ₹5 ಸಾವಿರ ಹಾಗೂ ಸಂತ್ರಸ್ತರ ಕೋರ್ಟ್ ವೆಚ್ಚ ₹5 ಸಾವಿರವನ್ನು ಪ್ರತ್ಯೇಕವಾಗಿ ಪಾವತಿಸಲು ಸೂಚಿಸಿದೆ.

ADVERTISEMENT

ಏನಿದು ಪ್ರಕರಣ?: ಮಾಗಡಿ ತಾಲ್ಲೂಕಿನ ಕುಪ್ಪೆಮಾಳ ಗ್ರಾಮದ ಸೋಮಶೇಖರ್ ಅವರು ಲಾರಿ ಖರೀದಿಗಾಗಿ 2018ರಲ್ಲಿ ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಹಿಂದೂಜಾ ಲೇಲ್ಯಾಂಡ್ ಫೈನಾನ್ಸ್ ಲಿಮಿಟೆಡ್‌ನಿಂದ ಸಾಲ ಪಡೆದಿದ್ದರು. ಆಗ, ಫೈನಾನ್ಸ್‌ನವರ ಮೂಲಕವೇ ರಿಲಿಗೇರ್ ಹೆಲ್ತ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್‌ನಿಂದ (ಪ್ರಸ್ತು ಕೇರ್ ಹೆಲ್ತ್ ಇನ್ಸುರೆನ್ಸ್ ಕಂಪನಿ) ₹23,023 ಪಾವತಿಸಿ ₹24,99,999 ಮೊತ್ತದ ಆರೋಗ್ಯ ವಿಮೆ ಖರೀದಿಸಿದ್ದರು.

ಸೋಮಶೇಖರ್ ಪತ್ನಿ ನಾಗರತ್ನಮ್ಮ ಅವರು ನಾಮಿನಿಯಾಗಿದ್ದ ವಿಮೆಯ ಅವಧಿ 2018ರ ಡಿ. 27ರಿಂದ 2022ರ ಡಿ. 26ರವರೆಗೆ ಇತ್ತು. ಸೋಮಶೇಖರ್ ಅವರು ಕ್ಯಾನ್ಸರ್‌ನಿಂದಾಗಿ 2020ರ ಮಾರ್ಚ್ 15ರಂದು ತೀರಿಕೊಂಡಿದ್ದರು. ಸಾಲದ ಮೊತ್ತ ಸರಿದೂಗಿಸಲು ಪಾಲಿಸಿ ನಿಯಮಗಳಂತೆ, ಹಿಂದೂಜಾ ಫೈನಾನ್ಸ್‌ಗೆ ಬಾಕಿ ಸಾಲ ಪಾವತಿಸಲು ವಿಮೆ ಕಂಪನಿಯರು ಹೊಣೆಗಾರರಾಗಿದ್ದರು.

ಆದರೆ, ವಿಮೆ ಮೊತ್ತ ನೀಡಲು ನಿರಾಕರಿಸಿದ ಕಂಪನಿ, ದೂರುದಾರರಿಂದ ಕಾನೂನಿನಡಿ ಸಾಲ ವಸೂಲಿ ಮಾಡುವಂತೆ ಹಿಂದೂಜಾ ಫೈನಾನ್ಸ್‌ಗೆ ಒತ್ತಾಯಿಸಿತ್ತು. ಇದನ್ನು ಪ್ರಶ್ನಿಸಿ ನಾಗರತ್ನಮ್ಮ ಅವರು ಆಯೋಗದ ಮೆಟ್ಟಿಲೇರಿದ್ದರು.

ಸೇವಾ ನ್ಯೂನತೆ ಕಾರಣಕ್ಕಾಗಿ ಗ್ರಾಹಕರ ಸಂರಕ್ಷಣಾ ಕಾಯ್ದೆ–2019 ಕಲಂ 35ರಡಿ, ವಿಮಾ ಕಂಪನಿ ₹24,99,999 ವಿಮೆ ಮೊತ್ತ ಪಾವತಿಸಬೇಕು. ಮಾನಸಿಕ ಯಾತನೆ ಮತ್ತು ತೊಂದರೆಗೆ ₹1 ಲಕ್ಷ ಪರಿಹಾರದ ಜೊತೆಗೆ, ನ್ಯಾಯಾಲಯದ ವೆಚ್ಚವನ್ನು ಕಂಪನಿ ಭರಿಸಬೇಕು ಎಂದು ಆಯೋಗವನ್ನು ಕೋರಿದ್ದರು.

ದೂರನ್ನು ಕೈಗೆತ್ತಿಕೊಂಡು ಎರಡೂ ಕಡೆಯವರನ್ನು ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ಮತ್ತು ಸದಸ್ಯ ವೈ.ಎಸ್. ತಮ್ಮಣ್ಣ ನೇತೃತ್ವದ ಪೀಠವು, ನ. 29ರಂದು ದೂರುದಾರರ ಪರವಾಗಿ ಆದೇಶ ನೀಡಿದೆ.

‘ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ’

ವಿಮೆ ಖರೀದಿಸಿದ್ದ ಸೋಮಶೇಖರ್ ಅವರು ಷರತ್ತುಗಳಲ್ಲಿ ಆಕಸ್ಮಿಕ ಮರಣದ ಪ್ರಯೋಜನವನ್ನು ಆಯ್ಕೆ ಮಾಡಿಕೊಂಡಿದ್ದರು. ವಿಮಾದಾರರು ಸ್ವಾಭಾವಿಕ ಸಾವಿನಿಂದ ಮೃತಪಟ್ಟಿದ್ದಾರೆಯೇ ಹೊರತು, ಅಪಘಾತ ಅಥವಾ ಯಾವುದೇ ಗಾಯದಿಂದಲ್ಲ. ಪಾಲಿಸಿ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಆಕಸ್ಮಿಕ ಮರಣದಡಿ ವಿಮೆ ಪಾವತಿಸಲು ಬರುವುದಿಲ್ಲ ಎಂದು ಕಂಪನಿ ವಾದ ಮಂಡಿಸಿತ್ತು. ವಾದ ಆಲಿಸಿದ್ದ ಪೀಠವು, ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿತ್ತು. ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಯಮಗಳು ಮತ್ತು ಷರತ್ತುಗಳ ತಾಂತ್ರಿಕ ಕಾರಣ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ (ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಸ್ವರಣ್ ಸಿಂಗ್ ಮತ್ತಿತರರ ಪ್ರಕರಣ) ನೀಡಿದ್ದ ತೀರ್ಪು ಉಲ್ಲೇಖಿಸಿದ ಪೀಠವು, ದೂರುದಾರರ ವಾದವನ್ನು ಪುರಸ್ಕರಿಸಿತು. ದೂರು ದಾಖಲಾದ 2023ರ ಜ. 1ರಿಂದ ಶೇ 6ರಷ್ಟು ಬಡ್ಡಿಯಂತೆ 45 ದಿನದೊಳಗೆ
ದೂರುದಾರರಿಗೆ ಪರಿಹಾರ ಪಾವತಿಸಬೇಕು ಎಂದು ಆದೇಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.