ADVERTISEMENT

‘ಕೊರೊನಾ ವೈರಸ್: ಭಯದ ಅಗತ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:09 IST
Last Updated 4 ಫೆಬ್ರುವರಿ 2020, 13:09 IST
ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮಲು ಅವರನ್ನು ಮುಖಂಡರು ಸ್ವಾಗತಿಸಿದರು
ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮಲು ಅವರನ್ನು ಮುಖಂಡರು ಸ್ವಾಗತಿಸಿದರು   

ರಾಮನಗರ: ಕೊರೊನಾ ವೈರಸ್ ಸೋಂಕು ತಡೆಗೆ ಕರಾವಳಿ ಭಾಗ ಸೇರಿದಂತೆ ರಾಜ್ಯದ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಜನರು ಕಳವಳಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ರಾಜ್ಯದ ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದೇಶದಿಂದ ಬಂದಿದ್ದ 46 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 29 ಮಂದಿಯ ರಕ್ತದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ನೆಗೆಟಿವ್ ಎಂದು ವರದಿ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಯಾವ ಭಾಗದ ಜನತೆಯೂ ಭಯ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ ಕರಾವಳಿ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ. ಸರ್ಕಾರಿ ಬ್ಲಡ್ ಬ್ಯಾಂಕ್ ಗಳಲ್ಲಿಯೇ ರಕ್ತ ಪರಿಶೀಲನೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ಅಂಶಗಳು ಪತ್ತೆಯಾಗಿಲ್ಲ. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಅವರು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ತಡೆಯುವ ಸಲುವಾಗಿ ವೈದ್ಯರ ತಂಡವನ್ನು ನೇಮಕ ಮಾಡಲಾಗಿದೆ. ವಿದೇಶಿಗರ ರಕ್ತ ಪರೀಕ್ಷೆಯನ್ನು ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೂಲ-ವಲಸಿಗ ಭೇದವಿಲ್ಲ: ‘ಭಾರತೀಯ ಜನತಾ ಪಾರ್ಟಿಯಲ್ಲಿ ಯಾವುದೇ ಗೊಂದಲವಿಲ್ಲ. ಆಕಾಂಕ್ಷಿಗಳಿಗೆ ಆಸೆ ಇರುವುದು ಸಹಜ, ಪಾರ್ಟಿಯಿಂದ ಎಲ್ಲರಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಪಕ್ಷದಲ್ಲಿ ಮೂಲ ಮತ್ತು ವಲಸಿಗ ಎಂಬ ಭೇದವಿಲ್ಲ’ ಎಂದು ತಿಳಿಸಿದರು.

‘ನಮ್ಮ ಪಾರ್ಟಿ ಅಧಿಕಾರದಲ್ಲಿದೆ, ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಈ ವೇಳೆ ಸಚಿವರ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಪಕ್ಷದ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

‘ಹಿರಿಯ ಮುಖಂಡ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವನ್ನೂ ನಮ್ಮ ಪಕ್ಷದ ವರಿಷ್ಠರೇ ನೋಡಿಕೊಳ್ಳುತ್ತಾರೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದಷ್ಟೇ ಹೇಳಬಲ್ಲೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜ್, ಬಿ. ನಾಗೇಶ್, ಪದ್ಮನಾಭ, ಪ್ರವೀಣ್ ಗೌಡ, ಮಂಜು, ಎಂ.ಎನ್. ಆನಂದಸ್ವಾಮಿ, ರುದ್ರದೇವರು, ಚಂದ್ರಶೇಖರ ರೆಡ್ಡಿ, ಗುಂಗರಹಳ್ಳಿ ಚನ್ನಪ್ಪ, ವಕೀಲ ವಿನೋದ್ ಭಗತ್, ಪಿ. ಶಬರಿ, ಚಂದ್ರಕಲಾ, ಚಕ್ಕಲೂರು ಚೌಡಯ್ಯ, ಕರಡಿಗೌಡ, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.