ADVERTISEMENT

ರಾಮನಗರ | ಒಂದೇ ದಿನ 35 ಪ್ರಕರಣ ದೃಢ

ಕನಕಪುರದಲ್ಲಿ ಸೋಂಕಿತರ ಸಂಖ್ಯೆ ಉಲ್ಬಣ; ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:49 IST
Last Updated 19 ಜೂನ್ 2020, 15:49 IST
ಮಾಗಡಿ ಪಟ್ಟಣದ ತಿರುಮಲೆ ಚೌಡೇಶ್ವರಿ ಗುಡಿ ಬೀದಿಯನ್ನು ಅಧಿಕಾರಿಗಳು ಶುಕ್ರವಾರ ಸೀಲ್‌ಡೌನ್‌ ಮಾಡಿದರು
ಮಾಗಡಿ ಪಟ್ಟಣದ ತಿರುಮಲೆ ಚೌಡೇಶ್ವರಿ ಗುಡಿ ಬೀದಿಯನ್ನು ಅಧಿಕಾರಿಗಳು ಶುಕ್ರವಾರ ಸೀಲ್‌ಡೌನ್‌ ಮಾಡಿದರು   

ರಾಮನಗರ: ದಿನ ಕಳೆದಂತೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಉಲ್ಬಣಗೊಳ್ಳುತ್ತಿದ್ದು, ಶುಕ್ರವಾರ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ರಾಮನಗರ ಮತ್ತು ಮಾಗಡಿಯಲ್ಲಿ ತಲಾ 4 ಪ್ರಕರಣಗಳು ಹಾಗೂ ಚನ್ನಪಟ್ಟಣದಲ್ಲಿ 2 ವರದಿಗಳು ಪಾಸಿಟಿವ್‌ ಆಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ ಆಗಿದೆ. ಕನಕಪುರ ವೈದ್ಯ ದಂಪತಿ ಮತ್ತು ಬಟ್ಟೆ ಅಂಗಡಿ ಯುವಕನ ಸಂಪರ್ಕದಲ್ಲಿದ್ದ ಒಟ್ಟು 25 ಮಂದಿಗೆ ಸೋಂಕು ಧೃಢಪಟ್ಟಿದೆ. ಕನಕಪುರದ ಖಾಸಗಿ ಆಸ್ಪತ್ರೆ ವೈದ್ಯರ ಸಂಪರ್ಕಕ್ಕೆ ಬಂದಿದ್ದ ರೋಗಿಗಳ ಕೋವಿಡ್‌ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇದು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ರಾಮನಗರ ತಾಲೂಕಿನಲ್ಲಿ 14 ಪ್ರಕರಣಗಳು ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಅಲ್ಲದೆ ಯಾವ ರೋಗಿಯ ಪ್ರಾಥಮಿಕ ಸಂಪರ್ಕ ದಲ್ಲಿ ಇದ್ದ ವ್ಯಕ್ತಿಗೆ ಸೋಂಕು ತಗುಲಿಗೆ ಎನ್ನುವ ಮಾಹಿತಿಯೂ ಲಭ್ಯವಾಗುತ್ತಿಲ್ಲ.

ADVERTISEMENT

ಮಾಗಡಿಯ ತಿರುಮಲೆ ಐಡಿಎಸ್‌ಎಂಟಿ ಲೇಔಟ್‌ ನ ಪಡಿತರ ವಿತರಕನಾಗಿದ್ದ ಸೋಂಕಿತನ ಕುಟುಂಬದವರಿಗೂ ಸೋಂಕು ತಗುಲಿದೆ. ಆತನ ಹೆಂಡತಿ, ಭಾವಮೈದುನ, ಅಳಿಯನಿಗೆ ಕೋವಿಡ್‌-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಜೊತೆಗೆ ಇವರ ಸಂಪರ್ಕಕ್ಕೆ ಬಂದ ಮೂವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆತ ತಿರುಮಲೆ ಚೌಡೇಶ್ವರಿ ಗುಡಿ ಬೀದಿಯಲ್ಲಿ ಪಡಿತರ ವಿತರಣೆ ಅಂಗಡಿ ನಡೆಸುತ್ತಿದ್ದ. ಸದ್ಯಕ್ಕೆ ಈ ಪ್ರದೇಶವನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.

ಮಾಗಡಿಯ ಡಾ. ರಾಜ್‌ಕುಮಾರ್‌ ರಸ್ತೆಯ ಅಂಗಡಿಯೊಂದರ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ. ಈಕೆ ಈಚೆಗೆ ಕಲ್ಯಾಣ ಮಂಟಪವೊಂದರಲ್ಲಿ ಕಾರ್ಯಕ್ರಮ ಮಾಡಿದ್ದು, ಬೆಂಗಳೂರಿನ ಅನೇಕರು ಪಾಲ್ಗೊಂಡಿದ್ದರು. ಅಲ್ಲಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹತ್ತು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.