ADVERTISEMENT

ಸ್ಕೆಚ್‌ ಹಾಕಿ ಕುಮಾರಸ್ವಾಮಿನ ಅಧಿಕಾರದಿಂದ ಇಳಿಸ್ದೆ: ಯೋಗೇಶ್ವರ್‌ ಆಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 14:15 IST
Last Updated 11 ಡಿಸೆಂಬರ್ 2020, 14:15 IST
ಸಿ.ಪಿ ಯೋಗೇಶ್ವರ್‌
ಸಿ.ಪಿ ಯೋಗೇಶ್ವರ್‌    

ರಾಮನಗರ: ‘ಎಚ್‌.ಡಿ. ಕುಮಾರಸ್ವಾಮಿ ಸರ್ಕಾರವನ್ನು ಸ್ಕೆಚ್‌ ಹಾಕಿ ಕೆಡವಿದ್ದು ನಾನೇ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡತೊಡಗಿದೆ.

ಚನ್ನಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ನಡೆದ ಗ್ರಾ.ಪಂ. ಪೂರ್ವಭಾವಿ ಸಭೆಯೊಂದರಲ್ಲಿ ಮಾತನಾಡಿರುವ ಯೋಗೇಶ್ವರ್‌ ಹೀಗೆ ಹೇಳಿದ್ದಾರೆ. ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ–ಶಿವಕುಮಾರ್‌ ಇಬ್ಬರೂ ಸೇರಿಕೊಂಡು ಚನ್ನಪಟ್ಟಣದಲ್ಲಿ ನನ್ನನ್ನು ಸೋಲಿಸಿದರು. ಇದರಿಂದ ಮತದಾರರಿಗೆ ಮುಖ ತೋರಿಸಲು ಬೇಸರವಾಗಿ ನಾನು ಬೆಂಗಳೂರು ಸೇರಿದೆ. ನಂತರ, ಬರೀ ಚನ್ನಪಟ್ಟಣದಲ್ಲಿ ರಾಜಕೀಯ ಮಾಡಿಕೊಂಡು ಇದ್ದರೆ ಆಗದು. ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಬೆಂಗಳೂರಿನಲ್ಲೇ ಕುಳಿತು ಸ್ಕೆಚ್‌ ಹಾಕಿ ಅವನನ್ನು ಅಧಿಕಾರದಿಂದ ಇಳಿಸಿದೆ’ ಎಂದು ಒಪ್ಪಿಕೊಂಡಿದ್ದಾರೆ.

‘ಚನ್ನಪಟ್ಟಣದಲ್ಲಿ ಒಮ್ಮೆ ಕಾಂಗ್ರೆಸ್ ಸಮಾವೇಶ ನಡೆದಾಗ ಶಿವಕುಮಾರನ ತಮ್ಮ ಸುರೇಶ ನನ್ನನ್ನು ಯಾರು ಅಂತ ಅಂತಿದ್ದ. ಅದಾದ ಬಳಿಕ ಸಮ್ಮಿಶ್ರ ಸರ್ಕಾರ ಉರುಳುತ್ತಲೇ ಶಿವಕುಮಾರನನ್ನು ತಿಹಾರ್‌ ಜೈಲಿಗೆ ಕರೆದುಕೊಂಡು ಹೋಗಲಾಯಿತು. ಕರ್ನಾಟಕದಿಂದ ಯಾರಾದರೂ ಭ್ರಷ್ಟಾಚಾರ ಆರೋಪ ಹೊತ್ತು ಈ ಜೈಲಿಗೆ ಹೋಗಿದ್ದರೆ ಅದು ಒಬ್ಬನೇ, ಈಗಿನ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ. ಈಗ ಈ ಅಣ್ತಮ್ಮಂದಿರಿಗೆ, ದೇವೇಗೌಡರ ಮಗನಿಗೆ ನಾನು ಯಾರು ಎಂಬುದು ಗೊತ್ತಾಗಿದೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಕಳೆದ ಚುನಾವಣೆಯಲ್ಲಿ ನಾನೇನಾದರೂ ಗೆದ್ದಿದ್ದರೆ ಇಷ್ಟೊತ್ತಿಗೆ ಒಬ್ಬ ಉಪಮುಖ್ಯಮಂತ್ರಿಯೋ, ಪ್ರಭಾವಿ ಮಂತ್ರಿಯೋ ಆಗಿರುತ್ತಿದ್ದೆ. ಈಗಲೂ ಬಿಜೆಪಿ ನನ್ನ ಕೈಬಿಟ್ಟಿಲ್ಲ. ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಕೊಡಲು ನನ್ನನ್ನು ಮಂತ್ರಿ ಮಾಡೇ ಮಾಡುತ್ತಾರೆ. ಆದರೆ ಅದಕ್ಕೂ ಕುಮಾರಸ್ವಾಮಿ ಅಡ್ಡಿ ಪಡಿಸುತ್ತಿದ್ದಾರೆ. ರಾತ್ರೋ ರಾತ್ರಿ ಬಿಜೆಪಿ ನಾಯಕರ ಮನೆ ಬಾಗಿಲು ಬಡಿಯುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಒಂದಿಬ್ಬರು ಗುತ್ತಿಗೆದಾರರು ಹೊರತುಪಡಿಸಿ ಮತ್ಯಾರೂ ಗೊತ್ತಿಲ್ಲ. ಆತ ಏನಾದರೂ ಚನ್ನಪಟ್ಟಣದ 10 ಊರಿನ ಹೆಸರು ಹೇಳಿದರೆ ನಾನು ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗೆ ಯೋಗೇಶ್ವರ್‌ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.