ADVERTISEMENT

ರೆಕ್ಕೆ ಕಡಿದ ಎಚ್‌ಡಿಕೆ: ನಿರ್ಮಾಪಕ ಸಿ.ಆರ್. ಮನೋಹರ್‌ ಆರೋಪ

ಅವಧಿ ಮುಗಿಯುವವರೆಗೂ ಜೆಡಿಎಸ್‌ನಲ್ಲಿಯೇ ಇರುತ್ತೇನೆ: ಮನೋಹರ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 8:00 IST
Last Updated 8 ನವೆಂಬರ್ 2021, 8:00 IST
ಸಿ.ಆರ್.ಮನೋಹರ್
ಸಿ.ಆರ್.ಮನೋಹರ್   

ಆನೇಕಲ್: ವಿಧಾನಪರಿಷತ್‌ ಸದಸ್ಯತ್ವದ ಅವಧಿ ಇನ್ನೂ ಮೂರು ತಿಂಗಳಿದೆ. ಹಾಗಾಗಿ ಅವಧಿ ಪೂರ್ಣಗೊಳ್ಳುವವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ. ಮುಂದಿನ ದಿನಗಳಲ್ಲಿ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್‌ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಿ.ಆರ್‌.ಮನೋಹರ್‌ತಿಳಿಸಿದರು.

ಅವರು ತಾಲ್ಲೂಕಿನ ಸರ್ಜಾಪುರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷದ ಮುಖಂಡರೊಂದಿಗೆ ಚರ್ಚಿಸಿಲ್ಲ. ಬೇರೆ ಪಕ್ಷಕ್ಕೆ ಸೇರ್ಪಡೆ ಕೇವಲ ಊಹಾಪೋಹವಷ್ಟೇ. ಜೆಡಿಎಸ್‌ನ ವರಿಷ್ಠ ಎಚ್‌.ಡಿ.ದೇವೇಗೌಡರೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಕ್ಷ ಬಿಟ್ಟು ಹೋಗುವುರಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ‘ಈ ಬಗ್ಗೆ ಮಾಹಿತಿಯಿಲ್ಲ. ಆದರೆ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅವರ ಅಧಿಕಾರ ಅವಧಿಯಲ್ಲಿ ಬೆಳೆಯಲು ಅವಕಾಶ ನೀಡಲಿಲ್ಲ. ರೆಕ್ಕೆಪುಕ್ಕ ಕಡಿದು ಹಾಕಿದರು’ ಎಂದು ಗಂಭೀರ ಆರೋಪ‍
ಮಾಡಿದರು.

ADVERTISEMENT

ಕಳೆದ ಕೆಲ ದಿನಗಳಿಂದ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿದ್ದೆ. ಆದರೆ, ಯಾವುದೇ ಹಂತದಲ್ಲೂ ಪಕ್ಷದ ಬಗ್ಗೆ ಅಥವಾ ನಾಯಕರಿಗೆ ಮುಜುಗರವಾಗುವಂತೆ ನಡೆದುಕೊಂಡಿಲ್ಲ ಎಂದರು.

ಪಕ್ಷದಲ್ಲಿರುವವರೆಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬೇರೆ ಸಾಧ್ಯತೆ ನೋಡಿಕೊಳ್ಳಬೇಕಾಗುತ್ತದೆ. ಹಿತೈಷಿಗಳು, ಮುಖಂಡರೊಂದಿಗೆ ಚರ್ಚಿಸಿ ಮೂರು ತಿಂಗಳ ನಂತರ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.