ADVERTISEMENT

ದಲಿತರ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:56 IST
Last Updated 15 ಡಿಸೆಂಬರ್ 2019, 13:56 IST
ಭಾನುವಾರ ಐಜೂರು ವೃತ್ತದಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು
ಭಾನುವಾರ ಐಜೂರು ವೃತ್ತದಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು   

ರಾಮನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಘಟನೆ ಸಂಬಂಧಿಸಿಶಾಸಕ ಸಾ.ರಾ.ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.

ಇಲ್ಲಿನ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಸಾ.ರಾ.ಮಹೇಶ್ ವಿರುದ್ಧ ದಿಕ್ಕಾರ ಕೂಗಿ, ಹೆದ್ದಾರಿ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಕಾಲೊನಿಗೆ ನುಗ್ಗಿ ಶಾಸಕ ಸಾ.ರಾ.ಮಹೇಶ್ ಅವರ ಸಹೋದರ ಮತ್ತು ಸಹಚರರ ಗುಂಪು ದಲಿತರ ಮೇಲೆ ಗೂಂಡಾಗಿರಿ, ದುರ್ವರ್ತನೆ, ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಸಾ.ರಾ. ರವೀಶ್ ಹಾಗೂ ಸಹಚರರಿಗೆ ಶಾಸಕ ಸಾ.ರಾ. ಮಹೇಶ್ ಕುಮ್ಮಕ್ಕು ನೀಡಿರುವ ಕಾರಣ ಈ ಘಟನೆ ಜರುಗಿದೆ. ಸರ್ಕಾರ ಇದರ ಬಗ್ಗೆ ಸಮಗ್ರ ಹಾಗೂ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಗೋವಿಂದಯ್ಯ ಆಗ್ರಹಿಸಿದರು.

‘1989 ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಕಾರ ಯಾವುದೇ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ. ಆದ್ದರಿಂದ ಕೂಡಲೇ ಸರ್ಕಾರ ಮೈಸೂರು ಎಸ್ಪಿ ಹಾಗೂ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. 2019ರಲ್ಲಿ ಸುಪ್ರೀಂ ನ್ಯಾಯಾಲಯ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳನ್ನು ದೂರು ದಾಖಲಾದ 24 ಗಂಟೆಯ ಒಳಗೆ ಕೋರ್ಟ್‌ಗೆ ಒಪ್ಪಿಸಬೇಕೆಂಬ ನಿರ್ದೇಶನ ನೀಡಿದೆ. ಆದರೂ ಕರ್ತವ್ಯಲೋಪ ಎಸಗಿದ್ದರೂ ಅಧಿಕಾರಿಗಳನ್ನು ಅಮಾನತುಗೊಳಿಸಿಲ್ಲ’ ಎಂದರು.

ADVERTISEMENT

ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಲುವರಾಜು ಮಾತನಾಡಿ, ‘ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ನಿಲ್ಲಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ದಲಿತರ ಮನೆಗಳ ಮೇಲೆ ಸಾಮೂಹಿಕವಾಗಿ ಕಲ್ಲು ತೂರಾಟ ಮಾಡಿರುವುದು ಬಹಳ ವಿಚಿತ್ರ ಸಂಗತಿ. ದಲಿತರೇನು ಮನುಷ್ಯರಲ್ಲವೇ’ ಎಂದು ಪ್ರಶ್ನಿಸಿದರು.

ಹಿರಿಯ ಹೋರಾಟಗಾರ ಶಿವಕುಮಾರಸ್ವಾಮಿ ಮಾತನಾಡಿ, ‘ಸಾ.ರಾ.ಮಹೇಶ್ ಅವರ ಸಹೋದರನೇ ಸಾಲಿಗ್ರಾಮದಲ್ಲಿ ನಡೆದ ಗಲಭೆಯ ನೇತೃತ್ವ ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಇದು ನಿಜವಾದರೆ ಅವರನ್ನು ‍ಪೊಲೀಸರು ಬಂಧಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು. ದೌರ್ಜನ್ಯ ಎಸಗಿದ ಎಲ್ಲರನ್ನೂ ಜೈಲಿಗೆ ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಬನಶಂಕರಿ ನಾಗು, ಹಾರೋಹಳ್ಳಿ ಚಂದ್ರು, ರುದ್ರೇಶ್, ಕೋಟೆ ಪ್ರಕಾಶ್, ಚಕ್ಕೆರೆ ಲೋಕೇಶ್, ಹೊಂಬಾಳಯ್ಯ, ಗುಂಡ ದೇವರಹಳ್ಳಿ, ನರೇಶ್, ಲಕ್ಷ್ಮಣ್, ಪುಟ್ಟಸ್ವಾಮಿ, ಮಹಾಲಿಂಗ, ವೆಂಕಟೇಶ್, ಗುರುಮೂರ್ತಿ, ಶಿವರಾಜ್ ಭರಣಿ, ಗೋವಿಂದರಾಜು, ಹೇಮಂತ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.