ADVERTISEMENT

ಅರಮನೆ ವೇದಿಕೆಯಲ್ಲಿ ಕಲಾವಿದರಿಗೆ ಅವಕಾಶ

ಜಾನಪದ ಲೋಕದಲ್ಲಿ ವಿಜೃಂಭಣೆಯ ದಸರಾ ಜಾನಪದ ಉತ್ಸವಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:46 IST
Last Updated 19 ಅಕ್ಟೋಬರ್ 2018, 12:46 IST
ಹಗ್ಗಜಗ್ಗಾಟ ಸ್ಪರ್ಧೆಯ ದೃಶ್ಯ
ಹಗ್ಗಜಗ್ಗಾಟ ಸ್ಪರ್ಧೆಯ ದೃಶ್ಯ   

ರಾಮನಗರ: ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಸಂಭ್ರಮದಲ್ಲಿ ಜನಪದ ಕಲಾವಿದರಿಗೆ ಅರಮನೆಯ ಮುಖ್ಯ ವೇದಿಕೆಯಲ್ಲಿ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಜಾನಪದ ವಿದ್ವಾಂಸ ಡಾ. ಹಿ.ಚಿ. ಬೋರಲಿಂಗಯ್ಯ ಆಗ್ರಹಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದಸರಾ ಜಾನಪದ ಉತ್ಸವದಲ್ಲಿ ಅವರು ಮಾತನಾಡಿದರು.

ಈಗಲೂ ಶಿಷ್ಟ ಕಲಾವಿದರಿಗೆ ಅರಮನೆಯ ಮುಖ್ಯವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟು, ಸಂಭಾವನೆಯನ್ನು ಹೆಚ್ಚಾಗಿ ಕೊಡಲಾಗುತ್ತಿದೆ. ಆದರೆ, ಜನಪದ ಕಲಾವಿದರಿಗೆ ಎಲ್ಲೊ ಒಂದು ಕಡೆ ಅವಕಾಶ ನೀಡಿ ಕಡಿಮೆ ಸಂಭಾವನೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಈ ನಿಟ್ಟಿನಲ್ಲಿ ಸರ್ಕಾರ ಅರ್ಧಗಂಟೆಯಾದರೂ ಜನಪದ ಕಲಾವಿದರು ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ನೀಡುವಂತೆ ಮುಂದಿನ ದಸರಾ ಸಂಭ್ರಮದಲ್ಲಾದರೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ತರಬೇತಿಯ ಮೂಲಕ ಮಾತ್ರ ಜನಪದ ಕಲೆಗಳನ್ನು ಉಳಿಸಬಹುದು. ರಾಜ್ಯದಲ್ಲಿ 175ಕ್ಕೂ ಹೆಚ್ಚು ಜನಪದ ಕಲೆಗಳಿವೆ. ಲಕ್ಷಾಂತರ ಮಂದಿ ಕಲಾವಿದರಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಾವಿದರನ್ನು ರಾಜಕಾರಣಿಗಳ ಮೆರವಣಿಗೆಗೆ ಮಾತ್ರ ಬಳಸಿಕೊಳ್ಳಲಾಗುತ್ತಿತ್ತು. ನಾಗೇಗೌಡರ ಹೋರಾಟದ ಫಲವಾಗಿ ಇಂದು ಕಲಾವಿದರಿಗೆ ಕಾರ್ಯಕ್ರಮಗಳು ಸಿಗುತ್ತಿವೆ. ಈಗಿನ ಅಧಿಕಾರಿಗಳು ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಉತ್ಸವವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಕೆ.ರಾಜೇಂದ್ರ ಮಾತನಾಡಿ ಸಾಕ್ಷ್ಯಚಿತ್ರಗಳನ್ನು ಮಾಡುವ ಮೂಲಕ ಕಲೆಗಳನ್ನು ರಕ್ಷಣೆ ಮಾಡಬೇಕು. ಕಲೆಗಳನ್ನು ಉಳಿಸುವುದು ಕಷ್ಟದ ಕೆಲಸವಾಗಿದೆ. ಕಲೆಗಳನ್ನೇ ನಂಬಿ ಬದುಕುತ್ತಿರುವ ಕಲಾವಿದರ ಜೀವನ ತುಂಬಾ ಕಷ್ಟವಾಗಿದೆ. ಜಾನಪದ ಲೋಕದ ಚಟುವಟಿಕೆಗಳಲ್ಲಿ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್ ಮಾತನಾಡಿ ನಾಗೇಗೌಡರು ಜನಪದ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಇತರರಿಗೆ ಮಾದರಿಯಾಗಿದೆ. ಜನಪದ ಕಲೆಗಳು ಈಗ ಪ್ಯಾಷನ್ ಆಗಿವೆ. ಹಲವು ಕಲಾವಿದರಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವ ಇಂದಿನ ಕಾರ್ಯಕ್ರಮ ನಿಜವಾದ ದಸರಾ ಆಗಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ನಾಗೇಗೌಡರ ಆಶಯಗಳನ್ನು ಈಡೇರಿಸಲಾಗುತ್ತಿದೆ. ಲೋಕದಲ್ಲಿ ವಿವಿಧ ಜನಪದ ಕಲೆಗಳ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಜನಪದ ಕಲೆಗಳು ಎಂದಿಗೂ ನಶಿಸುವುದಿಲ್ಲ ಎಂದು ತಿಳಿಸಿದರು.

ಜನಪದ ಕಲೆಗಳನ್ನು ಯುವ ಸಮುದಾಯ ಕಲಿಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಡೊಳ್ಳು, ಪಟ, ವೀರಗಾಸೆ ಕುಣಿತ ಕಲಿತು ಪ್ರದರ್ಶನ ನೀಡುತ್ತಿದ್ದಾರೆ. ಸರ್ಕಾರದ ವತಿಯಿಂದ ಕಲಾವಿದರಿಗೆ ನೀಡುವ ಸಂಭಾವನೆಯನ್ನು ಹೆಚ್ಚಿಗೆ ನೀಡಬೇಕು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಉದ್ಧಾರ ಮಾತನಾಡಿ ಸ್ಥಳೀಯವಾಗಿರುವ ದೇಸಿ ಕಲೆಗಳನ್ನು ಗುರುತಿಸಿ ಅವುಗಳನ್ನು ಸಂಗ್ರಹಿಸುವ ಕಾರ್ಯವನ್ನು ಮೊದಲು ಮಾಡಬೇಕು. ಜನಪದ ಕಲೆ ಹಾಗೂ ಸಾಹಿತ್ಯದಲ್ಲಿ ಭಾವೈಕ್ಯತೆ ಸಂದೇಶವನ್ನು ಕಾಣಬಹುದು. ಆದರೆ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಜನರಲ್ಲಿನ ಭಾವೈಕ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.