ADVERTISEMENT

ರಾಮಮಂದಿರಕ್ಕಾಗಿ ನಿಧಿ ಸಂಗ್ರಹಿಸಿದ ಡಿಸಿಎಂ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 14:03 IST
Last Updated 26 ಜನವರಿ 2021, 14:03 IST
ರಾಮನಗರದಲ್ಲಿ ಮಂಗಳವಾರ ಹಿರಿಯ ನಾಗರಿಕರೊಬ್ಬರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿದರು
ರಾಮನಗರದಲ್ಲಿ ಮಂಗಳವಾರ ಹಿರಿಯ ನಾಗರಿಕರೊಬ್ಬರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿದರು   

ರಾಮನಗರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕಾಗಿ ಮಂಗಳವಾರ ನಗರದಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗಿಯಾದರು. ಮನೆಮನೆಗೂ ತೆರಳಿ ನಿಧಿ ಸಂಗ್ರಹ ಮಾಡಿದರು.

ಚಾಮುಂಡೇಶ್ವರಿ ಬಡಾವಣೆ, ಎಂ.ಜಿ. ರಸ್ತೆ, ನಗರಸಭೆ ಎದುರಿನ ಪ್ರದೇಶ, ಕೆಂಪೇಗೌಡ ವೃತ್ತ, ಪಂಚಮುಖಿ ಆಂಜನೇಯಸ್ವಾಮಿ ರಸ್ತೆ, ರೆಡ್ಡಿ ಸಾಮಿಲ್‌, ರಾಯರ ದೊಡ್ಡಿ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಸಚಿವರಿಗೆಸಾರ್ವಜನಿಕರು ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದರು. ಹಿರಿಯ ನಾಗರಿಕರು, ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಸಚಿವರಿಗೆ ನೀಡಿದರು. ಕೆಲ ಮಕ್ಕಳೂ ತಮ್ಮ ಸಂಗ್ರಹದಲ್ಲಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದು ವಿಶೇಷವಾಗಿತ್ತು.

ಈ ಸಂದರ್ಭ ಹಿರಿಯ ನಾಗರಿಕರೊಬ್ಬರು ಮಾತನಾಡಿ ‘ನಾನು ಬದುಕಿರುವಾಗಲೇ ಅಯೋಧ್ಯೆಯಲ್ಲಿ ನಮ್ಮ ರಾಮನಿಗೆ ಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮ ಪಾಲಿಗೆ ಸಂತೋಷದ ಸಂಗತಿ’ ಎಂದು ಡಿಸಿಎಂ ಅವರ ಕೈಹಿಡಿದು ಹೇಳಿದರು. ‘ನಿಮ್ಮೆಲ್ಲರ ಅಭಿಲಾಷೆಯಂತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ’ ಡಿಸಿಎಂ ಹೇಳಿದರು.

ADVERTISEMENT

ಈ ಸಂದರ್ಭ ಮಾತನಾಡಿದ ಅಶ್ವತ್ಥನಾರಾಯಣ ‘ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡಿ ಎಂದು ಯಾರನ್ನು ಯಾರೂ ಕೇಳುತ್ತಿಲ್ಲ. ಆದರೆ ಜನರೇ ರಾಮಮಂದಿರ ಸ್ವ-ಇಚ್ಛೆಯಿಂದ ಅಯೋಧ್ಯೆ ರಾಮನಿಗೆ ಮಂದಿರ ನಿರ್ಮಿಸಲು ಕೈಜೋಡಿಸುತ್ತಿದ್ದಾರೆ. ಅದರಲ್ಲೂ ಪುಟ್ಟ ಮಕ್ಕಳು ತಮ್ಮ ಖರ್ಚಿನ ಕಾಸನ್ನೂ ರಾಮರ ಸೇವೆಗೆ ಅರ್ಪಿಸಿದ್ದು ನನ್ನಲ್ಲಿ ಧನ್ಯತಾ ಭಾವ ಮೂಡಿಸಿದೆ’ ಎಂದರು.

ನಿಧಿ ಸಮರ್ಪಣಾ ಯಾತ್ರೆಯ ವೇಳೆ ಕೆಲ ಮನೆಗಳಲ್ಲಿ ರಾಮಪೂಜೆಯನ್ನು ಏರ್ಪಡಿಸಲಾಗಿತ್ತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಎಚ್‌.ಎಂ. ಕೃಷ್ಣಮೂರ್ತಿ ಮತ್ತಿತರರು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.