ರಾಮನಗರ: ನಗರದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೈಯಕ್ತಿಕ ಕಾರ್ಯನಿಮಿತ್ತ ಸೋಮವಾರ ಸಂಜೆ ಭೇಟಿ ನೀಡಿದರು. ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದ ಶಿವಕುಮಾರ್, ತಮ್ಮ ಪತ್ನಿ ಉಷಾ ಅವರ ಹೆಸರಿಗೆ ಕೆಲ ಆಸ್ತಿಗಳ ದಾನಪತ್ರ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದರು.
ಬಳಿಕ, ನಗರದ ಬಿ.ಎಂ. ರಸ್ತೆ ಪಕ್ಕ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನದ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ‘ವೈಯಕ್ತಿಕ ಕೆಲಸ ಹಾಗೂ ಕಾಂಗ್ರೆಸ್ ಕಚೇರಿಯ ಜಾಗ ನೋಂದಣಿ ಆಗಬೇಕಿತ್ತು. ಅದಕ್ಕಾಗಿ ಕಚೇರಿ ಭೇಟಿ ನೀಡಿದ್ದೆ’ ಎಂದರು.
‘ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಕಚೇರಿಯ ಜಾಗವು ನನ್ನ ಹೆಸರಿನಲ್ಲಿದೆ. ಮುಂದಿನ ದಿನಗಳಲ್ಲಿ ಅದನ್ನು ಕಾಂಗ್ರೆಸ್ ಕಚೇರಿ ಹೆಸರಿಗೆ ವರ್ಗಾವಣೆ ಮಾಡುತ್ತೇನೆ’ ಎಂದು ತಿಳಿಸಿದರು.
‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪಕ್ಷದ ಶಾಸಕರು, ಕಾರ್ಯಕರ್ತರ ಅಹವಾಲು ಆಲಿಸುತ್ತಿದ್ದಾರೆ. ನಾನೂ ಅಲ್ಲಿಗೆ ಹೋಗುವೆ. ನಮ್ಮೊಳಗೆ ಯಾವುದೇ ಅಸಮಾಧಾನ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಕೆ.ಎಂ. ಉದಯ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.