ADVERTISEMENT

ಡಿಕೆಶಿ ಮುಖ್ಯಮಂತ್ರಿ ಆಗೋದು ನಿಶ್ಚಿತ: ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 23:00 IST
Last Updated 28 ಅಕ್ಟೋಬರ್ 2025, 23:00 IST
ಹಾರೋಹಳ್ಳಿಯ ಟಿ.ಹೊಸಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
ಹಾರೋಹಳ್ಳಿಯ ಟಿ.ಹೊಸಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.   

ಹಾರೋಹಳ್ಳಿ: ‘ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗೋದು ಖಚಿತ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ’ ಎಂದು ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರು.

ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವಿವಿದೆಢೆ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಡಿ.ಕೆ.ಶಿವಕುಮಾರ್ ಪಕ್ಷ ಸಂಘಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ತಿಳಿಸಿದರು.

ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಾದ್ಯಂತ ₹5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸೋಮವಾರವಷ್ಟೇ ಬಗರ್ ಹುಕುಂ ಸಾಗುವಳಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸುಮಾರು 307 ಜನರಿಗೆ ಈಗಾಗಲೇ ಸಾಗುವಳಿ ಚೀಟಿಯನ್ನು ಇಂಡೀಕರಣ ಮಾಡಿದ್ದೇವೆ. ಮುಂದಿನ ಸೋಮವಾರ 68 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ ಎಂದರು.

ADVERTISEMENT

ನಿವೇಶನಕ್ಕಾಗಿ ಬೇಡಿಕೆ ಇದೆ. ಸರ್ಕಾರಿ ಜಮೀನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವುಗೊಳಿಸುವಂತೆ ಸೂಚನೆ ನೀಡಿಲಾಗಿದೆ ಎಂದು ಹೇಳಿದರು.

ತಾಲ್ಲೂಕು ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ. ರೈತರ ಬೆಳೆ ರಕ್ಷಣೆ ಆದ್ಯತೆಯಾಗಿದೆ ಎಂದರು.

ಕ್ಷೇತ್ರದಾದ್ಯಂತ ಶಾಲಾ ಕೊಠಡಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ಯತೆ ಮೇರೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ದೊಡ್ಡಸಾದೇನಹಳ್ಳಿ ಗ್ರಾಮಸ್ಥರು ಸಾಗುವಳಿ ಚೀಟಿ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುವುದು ಎಂದರು.

ತಹಶೀಲ್ದಾರ್ ಹರ್ಷವರ್ಧನ್, ಇಒ ಅಪೂರ್ವ ಕುಲಕರ್ಣಿ, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಮೋಹನ್ ಹೊಳ್ಳ, ಕಿರಣಗೆರೆ ಜಗದೀಶ್, ಜೆಸಿಬಿ ಅಶೋಕ್, ಸಾದೇನಹಳ್ಳಿ ಈಶ್ವರ್, ಸಾದೇನಹಳ್ಳಿ ಲೋಕೇಶ್, ಕೇಬಲ್ ರವಿ, ರುದ್ರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.