ಮಾಗಡಿ: ‘ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ. ಇದು ಬಾಲಕೃಷ್ಣದ್ದಷ್ಟೇ ಅಲ್ಲ, ನನ್ನ ಮತ್ತು ಡಿ.ಕೆ. ಸುರೇಶ್ ಕ್ಷೇತ್ರ ಕೂಡ. ನಮ್ಮ ಕನಕಪುರದಂತೆ ಇಲ್ಲೂ ಅಭಿವೃದ್ಧಿ ಕೆಲಸ ಮಾಡುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕ್ಷೇತ್ರಕ್ಕೆ ಶ್ರೀರಂಗ ಕುಡಿಯುವ ನೀರಿನ ಯೋಜನೆ, ಸತ್ತೇಗಾಲದಿಂದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ’ ಎಂದರು.
‘ಕಂದಾಯ ಗ್ರಾಮಗಳಾಗಿ ತಾಲ್ಲೂಕಿನ 159 ಗ್ರಾಮಗಳ ಘೋಷಣೆ, ಮಂಚನಬೆಲೆ ಅಣೆಕಟ್ಟೆ ಕೆಳಭಾಗದ ಅಭಿವೃದ್ದಿಗೆ ₹13 ಕೋಟಿ, ₹35 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಇಲಾಖೆಯಿಂದ ಕ್ಷೇತ್ರದ ಅಭಿವೃದ್ದಿಗೆ ₹100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ’ ಎಂದು ಹೇಳಿದರು.
‘ಗೌರಮ್ಮ ಕೆರೆ ಅಭಿವೃದ್ಧಿಗೆ ₹20 ಕೋಟಿ ನೀಡಲಾಗಿದೆ. 1,200 ಜನರಿಗೆ ಇ–ಸ್ವತ್ತು ವಿತರಣೆ ಮಾಡಲಾಗಿದೆ. ಸುಮ್ಮನಹಳ್ಳಿಯಿಂದ ಮಾಗಡಿ ತಾಲ್ಲೂಕಿನ ತಾವರೆಕೆರೆವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾಗಲಿದೆ. ಕೆಂಪೇಗೌಡರ ಕೋಟೆ ಹಾಗೂ ಕೆಂಪಾಪುರದಲ್ಲಿರುವ ಸಮಾಧಿ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದೇವೆ. ಸುಮ್ಮನಹಳ್ಳಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಭವನ ನಿರ್ಮಿಸಲಾಗುತ್ತಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ‘ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಶ್ರಮ ಮಹತ್ವದ್ದು. ಅವರಿಂದಾಗಿಯೇ ನಾನು ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷನಾದೆ. ಗ್ಯಾರಂಟಿಗಳಿಂದಾಗಿ ಜನರ ತಲಾ ಆದಾಯ ಹೆಚ್ಚಾಗಿದೆ. ಕುಟುಂಬದ ಆರ್ಥಿಕತೆ ವೃದ್ದಿಸಿದೆ’ ಎಂದು ಹೇಳಿದರು.
ನೆಲಮಂಗಲ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ಶಿವಣ್ಣ ಕಲ್ಕೆರೆ, ಬಮೂಲ್ ಉಪಾಧ್ಯಕ್ಷ ಕೆಇಬಿ ರಾಜಣ್ಣ, ಮಾಗಡಿ ಪುರಸಭೆ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಜ್ ಅಹಮದ್ ಖಾನ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಮಾಜಿ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಉಪ ವಿಭಾಗಾಧಿಕಾರಿ ಬಿನೋಯ್, ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ. ಇಒ ಜೈಪಾಲ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ ಅತಿಥಿಗಳನ್ನು ಸ್ವಾಗತಿಸಿದರು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡ ಗಾಯನ ನಡೆಸಿ ಕೊಟ್ಟಿತು. ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಡಿಸಿಎಂ ಮತ್ತು ಸಚಿವರಿಗೆ ಬೆಳ್ಳಿ ಗದೆ ಹಾಗೂ ಕೆಂಪೇಗೌಡ ಮೂರ್ತಿ ನೀಡಿ ಸನ್ಮಾನಿಸಲಾಯಿತು.
ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ
– ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಶಾಸಕ ಬಾಲಕೃಷ್ಣ ಬೇಡಿಕೆಯಂತೆ ಕುದೂರಿನಲ್ಲಿ ಬಸ್ ಡಿಪೊ ನಿರ್ಮಿಸಲಾಗುವುದು. ಬಿಎಂಟಿಸಿ ಕಾರ್ಯಾಚರಣೆ ಮಿತಿ 25 ಕಿ.ಮೀ.ಯಿಂದ 40 ಕಿ.ಮೀ.ಗೆ ವಿಸ್ತರಿಸಲಾಗಿದ್ದು ಇದರಿಂದ ಮಾಗಡಿಗೆ ಅನುಕೂಲವಾಗಲಿದೆ
– ರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ
ಕಾಂಗ್ರೆಸ್ ಪಕ್ಷವು ಜನರ ಬದುಕು ರೂಪಿಸುವ ಗ್ಯಾರಂಟಿ ಯೋಜನೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂಂದಿದೆ. ಆದರೆ ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ
– ಎಚ್.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
‘ಮಾಗಡಿಯ ಕೆಂಪು ಬಂಡೆ ಬಾಲಕೃಷ್ಣ’ ‘ಎಲ್ಲರೂ ನನ್ನನ್ನು ಬಂಡೆ ಎನ್ನುತ್ತಾರೆ. ಆದರೆ ಈ ಬಾಲಕೃಷ್ಣ ಮಾಗಡಿಯ ಕೆಂಪು ಬಂಡೆ. ಜನರ ಋಣ ತೀರಿಸುವ ಬದ್ಧತೆ ಇರುವ ನಾಯಕ. ಅವರು ನನ್ನ ಬಳಿಗೆ ಬಂದರೆ ಭಯವಾಗುತ್ತದೆ. ಕೈಯಲ್ಲಿ ಅರ್ಜಿ ಹಿಡಿದುಕೊಂಡು ಬಂದು ತಮ್ಮ ಕ್ಷೇತ್ರಕ್ಕೆ ಬೇಕಾದ್ದನ್ನು ಬರೆಯಿಸಿಕೊಂಡು ಹೋಗುತ್ತಾರೆ. ಈಗಲೂ ಸಚಿವರಿಗೆ ಬೆಳ್ಳಿ ಗದೆ ಕೊಟ್ಟು ತಮಗೆ ಬೇಕಾದ್ದನ್ನು ಘೋಷಣೆ ಮಾಡಿಸಿಕೊಂಡರು. ನನಗೆ ಯಾವುದೇ ಸನ್ಮಾನ ಬೇಡ. ಮುಂದಿನ ಸಲವೂ ಬಾಲಕೃಷ್ಣ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ. ಅದೇ ನನಗೆ ಮಾಡುವ ಸನ್ಮಾನ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಆಸ್ಪತ್ರೆಗಳು ಮೇಲ್ದರ್ಜೆಗೆ: ಸಚಿವ ‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಈಗಾಗಲೇ ನೆಲಮಂಗಲ ಆನೇಕಲ್‌ನಲ್ಲಿ ಹೊಸ ತಾಲ್ಲೂಕು ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಇದೀಗ ಮಾಗಡಿಯಲ್ಲೂ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಕುದೂರು ಹೋಬಳಿಯ ಆಸ್ಪತ್ರೆಯನ್ನು ಸಹ ಮೇಲ್ದರ್ಜೆಗೇರಿಸಿ ಅಗತ್ಯ ಸಲಕರಣೆಗಳನ್ನು ಒದಗಿಸಲಾಗುವುದು. ಜಿಲ್ಲಾಸ್ಪತ್ರೆಗೆ ಸದ್ಯದಲ್ಲೇ ಎಂ.ಆರ್.ಐ ಯಂತ್ರ ನೀಡಲಾಗುವುದು. ಎಲ್ಲಾ ಆಸ್ಪತ್ರೆಗಳಲ್ಲಿ ದಿನದ 24 ತಾಸು ಸೇವೆ ಒದಗಿಸಲು ವೈದ್ಯರು ಮತ್ತು ಸಿಬ್ಬಂದಿ ಸೇರಿ ತಲಾ ಇಬ್ಬರನ್ನು ಒದಗಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಚೆಕ್ ಡ್ಯಾಂ ಮಂಜೂರಿಗೆ ಬಾಲಕೃಷ್ಣ ಆಗ್ರಹ ‘ನಮ್ಮ ತಾಲ್ಲೂಕು ಮಳೆಯಾಶ್ರಿತವಾಗಿದೆ. ನೀರು ಸಂಗ್ರಹಕ್ಕೆ ಹೆಚ್ಚಿನ ಚೆಕ್ ಡ್ಯಾಂಗಳನ್ನು ಮಂಜೂರು ಮಾಡಬೇಕು’ ಎಂದು ಡಿಸಿಎಂ ಅವರಿಗೆ ‘ತಾಲ್ಲೂಕಿನ ಕುದೂರಿನಲ್ಲಿ ಬಸ್ ಡಿಪೊ ಮಂಜೂರು ಮಾಡಿ ಆರು ತಿಂಗಳಲ್ಲಿ ನೀವೇ ಬಂದು ಶಂಕುಸ್ಥಾಪನೆ ಮಾಡಬೇಕು’ ಎಂದು ಸಚಿವ ರಾಮಲಿಂಗಾ ರೆಡ್ಡಿ ಹಾಗೂ ‘ಕುದೂರಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು’ ಎಂದು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಒತ್ತಾಯಿಸಿದರು. ‘ಕೆಂಪೇಗೌಡರು ನಿರ್ಮಿಸಿದ ಕೋಟೆಯ ಜೀರ್ಣೋದ್ದಾರ ಕೆಲಸ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಡಿಸಿಎಂ ಮತ್ತು ಡಿ.ಕೆ. ಸುರೇಶ್ ಕೊಡುಗೆ ದೊಡ್ಡದು’ ಎಂದು ಕೃತಜ್ಞತೆ ಸಲ್ಲಿಸಿದರು.
ಏನೇನು ನಡೆಯಿತು?
* ₹103 ಕೋಟಿ ವೆಚ್ಚದಲ್ಲಿ ಮಾಗಡಿಯ ಐತಿಹಾಸಿಕ ಕೆಂಪೇಗೌಡರ ಕೋಟೆಯ ಜೀರ್ಣೋದ್ದಾರ ಕಾಮಗಾರಿ
* ₹41 ಕೋಟಿ ವೆಚ್ಚದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ
* ₹16 ಕೋಟಿ ವೆಚ್ಚದಲ್ಲಿ ಪಟ್ಟಣದ ಗೌರಮ್ಮನ ಕೆರೆಯ ಸೌಂದರೀಕರಣ ಮತ್ತು ಇತರ ಅಭಿವೃದ್ಧಿ ಕಾಮಗಾರಿ* ಮಾಗಡಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಡೂಮ್ ಲೈಟ್ ಸರ್ಕಲ್ ಮಾರ್ಗವಾಗಿ ಕೆಂಪೇಗೌಡ ಸರ್ಕಲ್‌ವರೆಗೆ ಪಾದಚಾರಿ ಮಾರ್ಗಗಳ ನವೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ
* ₹2 ಕೋಟಿ ವೆಚ್ಚದಲ್ಲಿ ಎನ್.ಇ.ಎಸ್ ವೃತ್ತ ಅಭಿವೃದ್ಧಿ ಕಾಮಗಾರಿ* ₹2.3 ಕೋಟಿ ವೆಚ್ಚದಲ್ಲಿ ತಾಲ್ಲೂಕು ಪತ್ರಕರ್ತರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
* 94-ಡಿ ಹಕ್ಕುಪತ್ರಗಳ ವಿತರಣೆ (500 ಜನರಿಗೆ) ಇ-ಸ್ವತ್ತು ವಿತರಣೆ* ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ವಿಎಸ್ಎಸ್ಎನ್ ಅಧ್ಯಕ್ಷ– ಉಪಾಧ್ಯಕ್ಷರು ಪುರಸಭೆ ವಿವಿಧ ಗ್ರಾ.ಪಂ. ಅಧ್ಯಕ್ಷರು ಹಾಗೂ ತಾಲ್ಲೂಕು ಪತ್ರಕರ್ತರಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.