ಮಾಗಡಿ (ರಾಮನಗರ): ‘ಧರ್ಮಸ್ಥಳದ ಆಸ್ತಿ ಹೊಡೆಯುವುದು ಬಿಜೆಪಿಯ ಆಂತರಿಕ ಯೋಜನೆಯಾಗಿದೆ. ಅದಕ್ಕಾಗಿಯೇ ಧರ್ಮಸ್ಥಳದ ವಿಷಯದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಧರ್ಮಸ್ಥಳದ ಆಸ್ತಿ ಕಬಳಿಸಲು ಹುನ್ನಾರ ನಡೆಸಿದೆ ಎನ್ನುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರಿಗೆ ಬುದ್ದಿಭ್ರಮಣೆಯಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಅಶೋಕ ಅವರಿಗೆ ತಾವೇನು ಮಾತನಾಡುತ್ತಾರೆ ಎಂಬುದರ ಅರಿವಿರುವುದಿಲ್ಲ. ಬಿಜೆಪಿಯವರು ಜಾತಿ ಮತ್ತು ಭಾವನೆ ಆಧಾರದ ಮೇಲೆಯೇ ರಾಜಕೀಯ ಮಾಡಿಕೊಂಡು ಬಂದಿದ್ದಾರೆ’ ಎಂದು ಕಿಡಿಕಾರಿದರು.
‘ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಿ ನಾಟಕ ಮಾಡುತ್ತಿದ್ದಾರೆ’ ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆಗೆ, ‘ಹೌದು, ದಿನಾ ನಾಟಕ ಮಾಡುತ್ತಿದ್ದೇನೆ’ ಎಂದು ವ್ಯಂಗ್ಯವಾಡಿದರು.
‘ನಾವು ಬೆಂಗಳೂರು ದಕ್ಷಿಣ ಜಿಲ್ಲೆಯ ಜನ. ರಾಮನಗರ ನಮ್ಮ ಜಿಲ್ಲಾ ಕೇಂದ್ರ. ನಮ್ಮ ಹೆಸರಿನ ಜೊತೆಗೆ ನಮ್ಮೂರಿನ ಇನಿಷಿಯಲ್ ಇದೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರಿನ ಮುಂದಿರುವ ಇನಿಷಿಯಲ್ ತೆಗೆಯಲು ಹೇಗೆ ಸಾಧ್ಯವಿಲ್ಲವೊ, ಅದೇ ರೀತಿ ನಮ್ಮ ಹೆಸರಿನ ಜೊತೆಗೆ ಮೂಲ ಜಿಲ್ಲೆ ಬೆಂಗಳೂರಿನ ಹೆಸರು ತೆಗೆಯಲು ಸಾಧ್ಯವಿಲ್ಲ. ಅದಕ್ಕಾಗಿ, ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದೆ’ ಎಂದು ಶಿವಕುಮಾರ್ ತಮ್ಮ ಭಾಷಣದಲ್ಲಿ ಹೇಳಿದರು.
‘ಮರು ನಾಮಕರಣ ತಡೆಯಲು ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಯತ್ನಿಸಿದರು. ಪ್ರತಿಭಟಿಸಲು ಕುಮ್ಮಕ್ಕು ಕೊಟ್ಟರು. ಆದರೆ, ನನಗೂ ಎಲ್ಲಾ ವಿದ್ಯೆ ಗೊತ್ತಿದ್ದರಿಂದ ಕಡೆಗೂ ಹೆಸರು ಬದಲಾಯಿಸಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ರಾಮನಗರಕ್ಕೆ ಬಂದು ರಾಜಕಾರಣ ಮಾಡಿದಾಗ ನಾವು ವಿರೋಧಿಸಿದ್ದೇವಾ? ಅದೇ ರೀತಿ, ಯಾರೇ ವಿರೋಧಿಸಿದರೂ ನಮ್ಮತನವನ್ನು ನಾವು ಬಿಟ್ಟು ಕೊಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.