ADVERTISEMENT

ಡಿಕೆಶಿಗೆ ಉನ್ನತ ಸ್ಥಾನ ಸಿಗಬೇಕು, ಅವರಂತ ನಾಯಕರ ಅಗತ್ಯವಿದೆ: ರಂಭಾಪುರಿ ಶ್ರೀ

ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 11:10 IST
Last Updated 6 ಜುಲೈ 2025, 11:10 IST
<div class="paragraphs"><p>ಡಿಕೆಶಿ,&nbsp;ರಂಭಾಪುರಿ</p></div>

ಡಿಕೆಶಿ, ರಂಭಾಪುರಿ

   

ಕನಕಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಅವರು ಹೆಚ್ಚು ಶಕ್ತಿ ತಂದುಕೊಟ್ಟಿದ್ದಾರೆ. ಅವರು ಅಧ್ಯಕ್ಷರಾದ ಬಳಿಕ ಪಕ್ಷ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಅವರಿಗೆ ಉನ್ನತ ಸ್ಥಾನ ಸಿಗಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಜ್ಜಹಳ್ಳಿಯಲ್ಲಿ ಭಾನುವಾರ ನಡೆದ ಇಷ್ಟಲಿಂಗ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗ್ರಾಮದ ಸಿದ್ದೇಶ್ವರ ಬೆಟ್ಟಕ್ಕೆ ನಿರ್ಮಿಸಿರುವ ಮೆಟ್ಟಿಲು ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಮತ್ತು ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ADVERTISEMENT

ಪಕ್ಷ ಜಯ ಗಳಿಸಿದ ಬಳಿಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಿ ಮಾಡಿಕೊಂಡ ಒಡಂಬಡಿಕೆಯಂತೆ‌ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಆ ಒಡಂಬಡಿಕೆ ಏನೆಂಬುದು ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಮಾತ್ರ ಗೊತ್ತಿದೆ. ಅದರಂತೆ, ನಡೆದುಕೊಂಡರೆ ರಾಜಕಾರಣಿಗಳಿಗೆ ಗೌರವ ಬರುತ್ತದೆ ಎಂದರು.

ರಾಜ್ಯದಲ್ಲಿ ನಾಯಕತ್ವದ ಕುರಿತು ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರೇ ಸ್ಪಷ್ಟಪಡಿಸಬೇಕು. ಶಿವಕುಮಾರ್ ಅವರು ಎಲ್ಲಾ ಜಾತಿ ಮತ್ತು ವರ್ಗಗಳ ನಾಯಕ ಎಂಬ ಮಾತು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. ಜಾತಿ ಮತ್ತು ಧರ್ಮಗಳ ನಡುವೆ ಒಡಕುಂಟು ಮಾಡುಚ ನಾಯಕರ ಬದಲು ಇಂತಹ ನಾಯಕರ ಅಗತ್ಯವಿದೆ ಎಂದು ತಿಳಿಸಿದರು.

ಉನ್ನತ ಸ್ಥಾನದ ವಿಷಯದಲ್ಲಿ ಶಿವಕುಮಾರ್ ಅವರ ಪ್ರಾರ್ಥನೆ ವಿಫಲವಾಗದು. ಮುಂದಿನ ದಿನಗಳಲ್ಲಿ ಅವರು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂಬ ನಂಬಿಕೆ ಇದೆ. ಇಡೀ ರಾಜ್ಯದ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹರಿಸುತ್ತಿರುವ ಶಿವಕುಮಾರ್ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವ ಭಾಗ್ಯ ಜನರಿಗೆ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಒಡಂಬಡಿಕೆಯಂತೆ ನಡೆದುಕೊಂಡರೆ ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ರಾಷ್ಟ್ರೀಯ ನಾಯಕರಿಗೆ‌ ಸಮಾಧಾನವಾಗುತ್ತದೆ. ಹೆಚ್ಚಿನ ಕೆಲಸ ಮಾಡಲು ಪ್ರೇರೆಪಣೆ ಸಿಗುತ್ತದೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡುವವರೆಗೂ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ ಎಂದು ಹೇಳಲು ಕೇಂದ್ರದ ನಾಯಕರಿಗೆ ಶಕ್ತಿ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅದನ್ನು ಪಕ್ಷದ ರಾಷ್ಟ್ರೀಯ ನಾಯಕರೇ ಹೇಳಬೇಕು. ಬೇರೆಯವರು ಹೇಳಿದರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ನೀತಿ ಮತ್ತು ನಿಯತ್ತು ಇದ್ದರೇ ಒಳ್ಳೆಯದಾಗುತ್ತದೆ. ಯಾಕೆಂದರೆ ಹಿಂದೆ ಬಿಜೆಪಿಯಲ್ಲಾದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಅಂತಹದ್ದು ಸಂಭವಿಸಬಾರದು ಎಂದರು.

ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಅಲ್ಲದೆ, ಗ್ಯಾರಂಟಿ ಯೋಜನೆಗಳು ಎಷ್ಟೋ ಜನರಿಗೆ ಇನ್ನೂ ತಲುಪಿಲ್ಲ ಎಂಬ ಅಪವಾದವೂ ಇದೆ. ಅಭಿವೃದ್ಧಿಗಾಗಿ ಗ್ಯಾರಂಟಿ ನಿಲ್ಲಿಸಿ ಎಂದು ನಾವು ಹೇಳುವುದಿಲ್ಲ. ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.