ADVERTISEMENT

ಪೆಟ್ರೋಲ್‌ ದರ ಏರಿಕೆಯೇ ಕೇಂದ್ರದ ಸಾಧನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 5:44 IST
Last Updated 6 ಜೂನ್ 2021, 5:44 IST
ಜಾಲಮಂಗಲದಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿದರು
ಜಾಲಮಂಗಲದಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿದರು   

ರಾಮನಗರ: ‘ಜನವರಿಯಿಂದ ಈವರೆಗೆ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ತಾಲ್ಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಶನಿವಾರ ಮಾಜಿ ಶಾಸಕ ಎಚ್‌.ಡಿ. ಬಾಲಕೃಷ್ಣ ನೆರವಿನಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ ₹220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ ಶೇ 3.17ರಷ್ಟು ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಟೀಕಿಸಿದರು.

ADVERTISEMENT

ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರುವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಈ ಮೂಲಕ ಜನಸಾಮಾನ್ಯರಿಗೆ ಪೆಟ್ರೋಲ್ ಕೈಗೆಟುಕದಂತೆ ಮಾಡಲು ನಿರ್ಧರಿಸಿದೆ. ನಾವೆಲ್ಲರೂ ಪೆಟ್ರೋಲ್ ಪಂಪ್‌ಗಳ ಮುಂದೆ ಪ್ರತಿಭಟನೆ ಮಾಡೋಣ ಎಂದು
ಹೇಳಿದರು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಕೋವಿಡ್ ಭೀತಿಯಿಂದ ಜನರು ಮನೆಯಿಂದ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿದ್ದರೂ ಜನರ ಜೀವ ಉಳಿಸಲು ಜನರ ಮನೆ ಬಾಗಿಲಿಗೆ ಹೋಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು ಎಂದು ಬಣ್ಣಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಶಾಲೆ ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟರು. ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್‌, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ್, ತಾ.ಪಂ. ಮಾಜಿ ಅಧ್ಯಕ್ಷರಾದ ಮಹದೇವಯ್ಯ, ಜಗದೀಶ್, ಗಾಣಕಲ್ ನಟರಾಜು, ಮುಖಂಡರಾದಕೆ. ರಮೇಶ್, ಕಾಂತರಾಜು ಪಟೇಲ್, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕಯರೇಹಳ್ಳಿ ಮಂಜುಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.