ADVERTISEMENT

ಕನಕಪುರ | ಆರೋಗ್ಯವಂತರೆ ನಿಜವಾದ ಶ್ರೀಮಂತರು: ಡಾ.ಸಿ.ಎನ್. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:39 IST
Last Updated 1 ಮಾರ್ಚ್ 2026, 4:39 IST
ಕನಕಪುರ ಬಿಎಸ್ ದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆದ ಆರೋಗ್ಯ ಶಿಬಿರದಲ್ಲಿ ಡಾ.ಸಿ.ಎನ್ ಮಂಜುನಾಥ್ ಮಾತನಾಡಿದರು
ಕನಕಪುರ ಬಿಎಸ್ ದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆದ ಆರೋಗ್ಯ ಶಿಬಿರದಲ್ಲಿ ಡಾ.ಸಿ.ಎನ್ ಮಂಜುನಾಥ್ ಮಾತನಾಡಿದರು   

ಕನಕಪುರ: ‘ದೇಶವು ಸುಭಿಕ್ಷವಾಗಿರಬೇಕಾದರೆ ದೇಶದ ಜನರ ಆರೋಗ್ಯ ಮುಖ್ಯವಾಗುತ್ತದೆ. 60– 70 ವರ್ಷಗಳ ತನಕ ಯಾರು ಆರೋಗ್ಯವಾಗಿರುತ್ತಾರೋ ಅವರೇ ನಿಜವಾದ ಶ್ರೀಮಂತರು’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಕಸಬಾ ಹೋಬಳಿ ಬಿಎಸ್ ದೊಡ್ಡಿ ಗ್ರಾಮದಲ್ಲಿ ಜನೋತ್ಸವ 2026 ಬಿಎಸ್ ದೊಡ್ಡಿ, ನ್ಯೂ ಡ್ರೀಮ್ ಫೌಂಡೇಶನ್, ಕಿದ್ವಾಯ್ ಸಂಸ್ಥೆ, ಶಂಕರ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಶನಿವಾರ ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವರ್ಷದಲ್ಲಿ ಒಂದು ಲಕ್ಷ ಹೆಣ್ಣು ಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬರುತ್ತಿದ್ದು ವರ್ಷದಲ್ಲಿ 50 ಸಾವಿರ ಮಂದಿ ಸಾವಿಗೆ ತುತ್ತಾಗುತ್ತಿದ್ದಾರೆ. ಕ್ಯಾನ್ಸರನ್ನು ಸಂಪೂರ್ಣವಾಗಿ ತಡೆಗಟ್ಟಲು 13 ರಿಂದ 16 ವರ್ಷದ ವಯೋಮಾನದವರಿಗೆ ಸರ್ಕಾರದಿಂದ ಉಚಿತವಾಗಿ ಗರ್ಭಕೋಶದ ಲಸಿಕೆ ನೀಡುವ ರಾಷ್ಟ್ರೀಯ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ರಾಜಸ್ಥಾನದ ಅಜ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಅದೇ ರೀತಿ ಇಂದು ಬಿಎಸ್ ದೊಡ್ಡಿಯಲ್ಲಿ ಕಾಕತಾಳೀಯವಾಗಿ ಆರೋಗ್ಯ ಶಿಬಿರ ನಡೆಸಿ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮೇಲಿನಿಂದ ನೋಡಲು ಎಷ್ಟೇ ಚೆನ್ನಾಗಿದ್ದರೂ ಒಳಗೆ ಆರೋಗ್ಯ ಸಮಸ್ಯೆಗಳಿರುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

‘ಇಂದು ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮನಸ್ಸು ಸರಿ ಇಲ್ಲ, ಆರೋಗ್ಯವು ಸರಿ ಇಲ್ಲ, ಹಿಂದಿನ ಕಾಲದಲ್ಲಿ ಯಾರಾದರೂ ಕುಡಿದು ಬಂದರೆ ಗ್ರಾಮದಿಂದ ಹೊರಗೆ ಮಲಗಿಸುತ್ತಿದ್ದರು. ಇಂದು ಕುಡಿಯದಿದ್ದರೆ ಅವರನ್ನು ನಿಕೃಷ್ಟವಾಗಿ ನೋಡಲಾಗುತ್ತದೆ. ಯಾವುದಕ್ಕೂ ಪ್ರಯೋಜನ ಇಲ್ಲದವರು ಎನ್ನುತ್ತಾರೆ’ ಎಂದು ತಿಳಿಸಿದರು.

‘ದೂಮಪಾನ ಮದ್ಯಪಾನ ಹಾಗೂ ಸೋಮಾರಿತನ ಹೆಚ್ಚಾಗಿದೆ. ಶೇ 50ರಷ್ಟು ಮಂದಿ ಸೋಮಾರಿಗಳಾಗಿ ಕಾಲ ಕಳೆಯುತ್ತಾರೆ. ಅರಳಿಕಟ್ಟೆ ಟಿ ಅಂಗಡಿಗಳ ಬಳಿ ಬೀಡಿ ಸಿಗರೇಟು ಸೇದುತ್ತಾ ಬೇಡವಾದ ವಿಷಯಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಮನುಷ್ಯನಿಗೆ ದೊಡ್ಡ ಶತ್ರು ಸೋಮಾರಿತನ’ ಎಂದು ಹೇಳಿದರು.

‘ದೇಶದಲ್ಲಿ 14 ಕೋಟಿ ಜನರಿಗೆ ಸಕ್ಕರೆ ಕಾಯಿಲೆ, 20 ಕೋಟಿ ಜನರಿಗೆ ಬಿಪಿ, ಪ್ರತಿ ವರ್ಷ ಮೂವತ್ತು ಲಕ್ಷ ಮಂದಿ ಹೃದಯ ರೋಗದಿಂದ ಸಾಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಕ್ಕಳು ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಇಂದು ಅಪ್ಪ ಅಮ್ಮನೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದು ದುರದೃಷ್ಟಕರ’ ಎಂದರು.

ಕೃಷಿ ಉತ್ಪನ್ನವಾಗಿ ಶ್ರೀಗಂಧ: ದೇಶದಲ್ಲಿ ಶ್ರೀಗಂಧ ಬೆಳೆಯುವ ರೈತರು ಕಷ್ಟ ಅನುಭವಿಸುತ್ತಿದ್ದರು. ಅದಕ್ಕಾಗಿ ಸಂಸತ್‌ನಲ್ಲಿ ಶ್ರೀಗಂಧವನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದು ಕೇಂದ್ರ ಸರ್ಕಾರವು ಅದಕ್ಕೆ ಒಪ್ಪಿಗೆ ನೀಡಿದೆ. ಒಂದು ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆದರೆ 15 ವರ್ಷಕ್ಕೆ ₹5 ಕೋಟಿ ಸಿಗಲಿದೆ. ತೆಂಗಿನ ಮರಗಳು ನಾಶವಾದರೆ ಸರ್ಕಾರದಿಂದಲೇ ಅದಕ್ಕೆ ಉಚಿತವಾಗಿ ಸಸಿಕೊಡಲಾಗುತ್ತಿದೆ. ಇದನ್ನು ರೈತರು ಬಳಸಿಕೊಳ್ಳಬೇಕೆಂದು ಹೇಳಿದರು.

ರಾಜಕೀಯ ಸಂಸ್ಕಾರ: ಚುನಾವಣೆ ಸಂದರ್ಭದಲ್ಲಿ ಮತದಾರರು ತಮಗೆ ಬೇಕಾದ ಪಕ್ಷಕ್ಕೆ ಮತ ನೀಡುತ್ತಾರೆ. ಅದೆಲ್ಲವೂ ಚುನಾವಣೆಗೆ ಸೀಮಿತಾಗಬೇಕು. ಚುನಾವಣೆ ಮುಗಿದ ಮೇಲೆ ಎಲ್ಲರೂ ಒಂದೇ ಪಕ್ಷ, ಅದು ಮನುಷ್ಯರ ಪಕ್ಷವಾಗಬೇಕು. ಎಲ್ಲ ಮತದಾರರನ್ನು ಒಂದೇ ರೀತಿಯಾಗಿ ಕಾಣಬೇಕು. ಬೇಧ ಭಾವವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶ, ಸಮಾನ ಸವಲತ್ತು ಸಿಗಬೇಕು. ಅದು ರಾಜಕೀಯ ಸಂಸ್ಕೃತಿ ಆಗಬೇಕು ಎಂದರು.

ಮನುಷ್ಯರಾಗಿ ಹುಟ್ಟಿದ ಮೇಲೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಬೇರೆಯವರಿಗೆ ತೊಂದರೆ ಆಗದಂತೆ ಸಮಾಜ ಸೇವೆ ಮಾಡಬೇಕು. ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳಬಾರದು. ಸಮಾಜ ಸೇವೆ ಮುಖ್ಯವಾಗಬೇಕು ಎಂದರು.

ಕ್ಯಾನ್ಸರ್, ಕಣ್ಣು ತಪಾಸಣೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಕೆ.ಪಿ.ಕುಮಾರ್, ಶೋಭಾ, ಜೈ ರಾಮೇಗೌಡ, ಚಂದ್ರಕಲಾ, ತಿಮ್ಮೇಗೌಡ, ರವಿ, ಸತೀಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.