ಕನಕಪುರ ಗಟ್ಟಿಗುಂದ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಸುರೇಶ್ ಅವರ ತಾಯಿಗೆ ಡಾ.ಸಿ.ಎನ್.ಮಂಜುನಾಥ್ ಸಾಂತ್ವಾನ ಮಾಡುತ್ತಿರುವುದು
ಕನಕಪುರ: ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಗಟ್ಟಿಗುಂದ ಗ್ರಾಮದ ರೈತ ಸುರೇಶ ಅವರ ಮನೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಗುರುವಾರ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಟಿಗುಂದ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿ ಮಾಡಿ ಸುರೇಶ್ ಅವರನ್ನು ಸಾಯಿಸಿತ್ತು.
ಕಾಡಾನೆ ದಾಳಿಯಿಂದ ಕಳೆದ ನಾಲ್ಕು ದಿನಗಳ ಹಿಂದೆ ತಿಪ್ಪೂರು ಗ್ರಾಮದಲ್ಲಿ ಒಬ್ಬ ರೈತ ಶಿವರುದ್ರನನ್ನು ಇದೇ ಒಂಟಿ ಆನೆ ದಾಳಿ ಮಾಡಿ ಸಾಯಿಸಿತ್ತು.
ಒಂದು ವಾರದಲ್ಲಿ ಎರಡನೇ ದಾಳಿಯಾಗಿ ಸುರೇಶ ಅವರು ಬುಧವಾರ ರಾತ್ರಿ ಸಾವಿಗೀಡಾಗಿದ್ದಾರೆ. ಈ ಭಾಗದಲ್ಲಿ ಒಂಟಿ ಕಾಡಾನೆಯಿದ್ದು ಅದು ರೈತರ ಮೇಲೆ ದಾಳಿ ಮಾಡುತ್ತಿದ್ದು ಒಂದೇ ವಾರದಲ್ಲಿ ಇಬ್ಬರನ್ನು ಸಾಯಿಸಿದೆ.
ಗ್ರಾಮದ ಜನತೆ ಮಾತನಾಡಿ ಒಂಟಿ ಆನೆಯೂ ಮನುಷ್ಯರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿ ಸಾಯಿಸುತ್ತಿದೆ, ಇದೊಂದು ರೀತಿಯ ಕೊಲೆಯಾಗಿದೆ. ಹಾಗಾಗಿ ಈ ಒಂಟಿ ಆನೆಯನ್ನು ಶೀಘ್ರವೇ ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಸಂಸದರಲ್ಲಿ ಮನವಿ ಮಾಡಿದರು.
ಸಂಸದರು ಸ್ಥಳದ್ಲಲೇ ಇದ್ದ ಅರಣ್ಯ ಅಧಿಕಾರಿಗಳ ಜೊತೆ ಮಾತನಾಡಿ ಮನುಷ್ಯರ ಮೇಲೆ ದಾಳಿ ಮಾಡಿ, ಇಬ್ಬರು ರೈತರ ಸಾವಿಗೆ ಕಾರಣವಾಗಿರುವ ಈ ಆನೆಯು ಅಪಾಯಕಾರಿಯಾಗಿದೆ. ಕೂಡಲೇ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಪಿ.ಕುಮಾರ್ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.