ADVERTISEMENT

ಪುಸ್ತಕಗಳ ಅಧ್ಯಯನಕ್ಕೆ ಲಕ್ಷ್ಮಿ ಮಂಜುನಾಥ್‌ ಕಿವಿಮಾತು

ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 7:48 IST
Last Updated 9 ಮಾರ್ಚ್ 2022, 7:48 IST
ಮಾಗಡಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ.ಶೈಲಜಾ, ಡಾ.ಭವಾನಿ, ಪ್ರಿಯದರ್ಶಿನಿ ಹಾಜರಿದ್ದರು
ಮಾಗಡಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ.ಶೈಲಜಾ, ಡಾ.ಭವಾನಿ, ಪ್ರಿಯದರ್ಶಿನಿ ಹಾಜರಿದ್ದರು   

ಮಾಗಡಿ: ‘ಹೆಣ್ಣು ಸಂಸಾರದ ಕಣ್ಣು ಅಂದರೆ ಸಾಲದು. ಎಲ್ಲಾ ರಂಗದಲ್ಲೂ ಸಮಾನ ಗೌರವ, ಪ್ರೋತ್ಸಾಹ, ಸಮಾನತೆ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್‌ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಘಟಕದಿಂದ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಕೀಳರಿಮೆ ಬಿಟ್ಟು ಎಲ್ಲಾ ರಂಗದಲ್ಲೂ ಧೈರ್ಯದಿಂದ ಮುನ್ನುಗ್ಗಿ ಸಮಾನ ಅವಕಾಶಗಳನ್ನು ದಕ್ಕಿಸಿಕೊಳ್ಳಬೇಕು. ನಿರ್ಭಯ ಪ್ರಕರಣದ ನಂತರ ಹೆದರದೆ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದೆ ಬರುತ್ತಿದ್ದಾರೆ ಎಂದರು.

ADVERTISEMENT

ಮೊಬೈಲ್‌ ಬಳಕೆ ಮಿತಿಗೊಳಿಸಿಕೊಂಡು ಪುಸ್ತಕಗಳ ಜೊತೆಗೆ ಮಹಿಳಾ ಸಾಧಕಿಯರ ಜೀವನದ ಸಾಹಸ ಗಾಥೆಗಳನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿನಿಯರು ಸಂಘಟಿತರಾಗಿ ಸಾಮಾಜಿಕ ಕಂಟಕಗಳು ಕಂಡುಬಂದಲ್ಲಿ ಶಾಂತಿಯುತವಾಗಿ ಪ್ರತಿಭಟಿಸಬೇಕು. ಅರಿವೇ ಗುರು. ಅನುಭವ ಜನ್ಯವಾದ ವಿದ್ಯೆಯಿಂದ ಮಾತ್ರ ಬದುಕು ಕಟ್ಟಿಕೊಳ್ಳಬಹುದು ಎಂದು ಸಲಹೆ
ನೀಡಿದರು.

ಬೆಂಗಳೂರಿನ ಎಸ್‌ಎಲ್‌ಎನ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಿಯದರ್ಶಿನಿ ಮಾತನಾಡಿ, ವಿದ್ಯಾರ್ಥಿನಿಯರು ಹಳೆಯದನ್ನು ಸ್ಮರಿಸುತ್ತಾ ಹೊಸ ಆಲೋಚನೆಗಳನ್ನು ಹುಟ್ಟು ಹಾಕಬೇಕು. ಅಕ್ಷರದ ಅರಿವಿನ ಮೂಲಕ ಜ್ಞಾನವಂತರು ಮಾನವಂತರಾಗಬೇಕು. ಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವಗಳ ಮೂಲಕ ಬಹುತ್ವ ಭಾರತದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಪ್ರಾಂಶುಪಾಲರಾದ ಡಾ.ಶೈಲಜಾ ಮಾತನಾಡಿ, ಎಲ್ಲಾ ರಂಗದಲ್ಲೂ ಮಹಿಳೆಯರಿಗೆ ಸಮಾನತೆ ಸಿಕ್ಕಿದಾಗ ಮಹಿಳಾ ದಿನಾಚರಣೆಯ ಅಗತ್ಯವಿರುವುದಿಲ್ಲ. ಗಂಡಸರು ಅಡುಗೆ ಮಾಡಿ ಬಡಿಸುವ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸಬೇಕು. ಮಹಿಳೆಯರನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ಹಾಲು ಉಣಿಸಲು, ತೊಟ್ಟಿಲು ತೂಗುವುದಕ್ಕೆ ಸೀಮಿತಗೊಳಿಸಿತ್ತು. ಕೆಲವು ವರ್ಗಗಳ ಮಹಿಳೆಯರು ಮುಂದುವರಿದಿರಬಹುದು. ಆದರೆ, ಬಹುತೇಕ ತಳವರ್ಗಗಳಲ್ಲಿನ ಮಹಿಳೆಯರು ಇನ್ನೂ ಪುರುಷರ ಸಂಕೋಲೆಯಿಂದ ಹೊರಗೆ ಬಂದಿಲ್ಲ. ಪುರುಷ ಪ್ರಧಾನ ಹೇರಿಕೆ ಇಲ್ಲದೆ ಮಹಿಳೆ ಬದುಕುವಂತಾಗಬೇಕು. ಸ್ಥಾಪಿತ ಪುರುಷ ಪ್ರಧಾನ ವ್ಯವಸ್ಥೇಯನ್ನು ಭೇದಿಸಿ ವಿದ್ಯಾರ್ಥಿನಿಯರು ಮುನ್ನುಗ್ಗಬೇಕು ಎಂದರು.

ಪ್ರಾಧ್ಯಾಪಕರಾದ ಡಾ.ಭವಾನಿ, ಸಹಾಯಕ ಪ್ರಾಧ್ಯಾಪಕರಾದ ತಿಮ್ಮಹನುಮಯ್ಯ, ಪದ್ಮಾ ಟಿ., ಸೀಮಾಕೌಸರ್‌, ಚಂದ್ರಪ್ರಭಾ, ಚಂದ್ರಕಲಾ, ರೂಪಶ್ರೀ, ಡಾ.ನಂಜುಂಡ ಪಿ., ಮಂಜುನಾಥ್‌, ಎಸ್‌. ಚಿದಾನಂದಸ್ವಾಮಿ, ಮಂಚಯ್ಯ, ಭಾಸ್ಕರ್‌, ಜಗದೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.