ರಾಮನಗರ: ತಾಲ್ಲೂಕಿನ ಕುಂಭಾಪುರದಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ನಷ್ಟವಾಗಿದ್ದು, ಆಕ್ರೋಶಗೊಂಡ ರೈತರು, ನಗರದ ಅರಣ್ಯ ಭವನದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಚೇರಿಗೆ ಶುಕ್ರವಾರ ಬೆಳಗ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಹದೇವ ಎಂಬುವರು ವಿಷ ಕುಡಿಯಲು ಯತ್ನಿಸಿದರೆ, ಶಾಂತಕುಮಾರ್ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಇತರೆ ಪ್ರತಿಭಟನಕಾರರು, ಪೊಲೀಸರು ಇಬ್ಬರಿಂದಲೂ ಬಾಟಲಿ ಕಸಿದುಕೊಂಡರು.
‘ಗುರುವಾರ ರಾತ್ರಿ ಆನೆಯು ತೆಂಗಿನ ಮರ, ರೇಷ್ಮೆ ಸೇರಿದಂತೆ ಇತರ ಬೆಳೆಗಳನ್ನು ನಾಶ ಮಾಡಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆ ಕಾಟದಿಂದ ಯಾವ ಬೆಳೆಯೂ ಉಳಿಯುತ್ತಿಲ್ಲ. ಸಮಸ್ಯೆ ತಡೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿಸಾಕಾಗಿದೆ’ ಎಂದು ರೈತರು ದೂರಿದರು.
‘ಕಾಡಾನೆ ಬರದಂತೆ ತಡೆಯಲು ಗ್ರಾಮದಲ್ಲಿ ಮೈಕ್ ಅಳವಡಿಸಲಾಗಿತ್ತು. ಗ್ರಾಮದ ಸಮೀಪ ಜಿಲ್ಲಾಧಿಕಾರಿ ನಿವಾಸವಿದ್ದು, ಅವರಿಗೆ ಅಡಚಣೆಯಾಗುತ್ತಿದೆ ಎಂಬ ಕಾರಣಕ್ಕೆ ಪೊಲೀಸರು ಮೈಕ್ ಕಿತ್ತುಕೊಂಡು ಹೋಗಿದ್ದಾರೆ’ ಎಂದು ಆರೋಪಿಸಿದರು.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೆಳೆ ನಾಶಕ್ಕೆ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಸ್ಥಳಕ್ಕೆ ಬಂದ ಡಿಸಿಎಫ್ ರಾಮಕೃಷ್ಣಪ್ಪ ಅವರು ಪರಿಹಾರದ ಭರವಸೆ ನೀಡಿದ್ದು, ಬಳಿಕ ರೈತರು ಪ್ರತಿಭಟನೆ ನಿಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.