ಶ್ರೇಯಸ್
ಕನಕಪುರ (ರಾಮನಗರ): ರೈತರ ಜಮೀನಿಗೆ ನುಗ್ಗಿದ್ದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಯೊಂದು ನಡೆಸಿದ ದಾಳಿಗೆ ಆನೆ ಕಾರ್ಯಪಡೆ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಬ್ಬಾಳು ವ್ಯಾಪ್ತಿಯು ಕಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಚನ್ನಪಟ್ಟಣದ ಎಲೆಕೇರಿಯ ಶ್ರೇಯಸ್ (20) ಮೃತರು. ಡಿಪ್ಲೋಮಾ ಮುಗಿಸಿದ್ದ ಅವರು, ಸಾತನೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬದ ಇಬ್ಬರು ಮಕ್ಕಳ ಪೈಕಿ, ಶ್ರೇಯಸ್ ಮೊದಲನೆಯವರಾಗಿದ್ದರು.
ಅರಣ್ಯದಂಚಿನಲ್ಲಿರುವ ರೈತರ ಜಮೀನಿಗೆ ನಾಲ್ಕು ಕಾಡಾನೆಗಳು ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಕುರಿತು ಇಲಾಖೆಗೆ ಮಾಹಿತಿ ಬಂದಿತ್ತು. ಆ ಮೇರೆಗೆ ಕಾರ್ಯಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ತೆರಳಿ, ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಡಿಸಿಎಫ್ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಗುಂಪಾಗಿದ್ದ ಮೂರು ಕಾಡಾನೆಗಳನ್ನು ಸಂಜೆ 4.15ರ ಸುಮಾರಿಗೆ ಸಿಬ್ಬಂದಿ ಅರಣ್ಯಕ್ಕೆ ಓಡಿಸುತ್ತಿದ್ದರು. ಆಗ ಪೊದೆಗಳ ನಡುವೆ ಇದ್ದ ಮತ್ತೊಂದು ಕಾಡಾನೆ ಸಿಬ್ಬಂದಿಯತ್ತ ನುಗ್ಗಿ ಶ್ರೇಯಸ್ ಮೇಲೆ ದಾಳಿ ನಡೆಸಿತು. ಗಂಭೀರವಾಗಿ ಗಾಯಗೊಂಡ ಶ್ರೇಯಸ್ ಅವರನ್ನು ಸಾತನೂರು ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ಹೇಳಿದರು.
ಆಸ್ಪತ್ರೆಯವರು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಶವ ಹಸ್ತಾಂತರಿಸಲಿದ್ದಾರೆ. ಅಲ್ಲಿಂದ ರಾಮನಗರದ ಡಿಸಿಎಫ್ ಕಚೇರಿಗೆ ತಂದು ಗೌರವ ಸಲ್ಲಿಸಲಾಗುವುದು. ನಂತರ ಚನ್ನಪಟ್ಟಣದ ಎಲೆಕೇರಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ. ಶ್ರೇಯಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ, ತಂದೆ ಅಥವಾ ತಾಯಿಗೆ ಪಿಂಚಣಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.