ADVERTISEMENT

ಕನಕಪುರ: ಆನೆಗಳಿಗೆ ಮುಳುವಾದ ಹಿನ್ನೀರ ಕಳೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 1:58 IST
Last Updated 10 ನವೆಂಬರ್ 2025, 1:58 IST
<div class="paragraphs"><p>ಕನಕಪುರ ತಾಲ್ಲೂಕಿನ ಸಾತನೂರು ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುವಾಗ ಮುಳುಗಿ ಮೃತಪಟ್ಟ ಕಾಡಾನೆಗಳು</p></div>

ಕನಕಪುರ ತಾಲ್ಲೂಕಿನ ಸಾತನೂರು ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುವಾಗ ಮುಳುಗಿ ಮೃತಪಟ್ಟ ಕಾಡಾನೆಗಳು

   

ಕನಕಪುರ: ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಆಗಾಗ ತೆಂಗಿನಕಲ್ಲು ಅರಣ್ಯಕ್ಕೆ ಕಾಡಾನೆಗಳ ಹಿಂಡು ಬರುವುದು ಸಾಮಾನ್ಯ.

ಪ್ರತಿಸಾರಿಯಂತೆ ಶುಕ್ರವಾರ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಹಿಂಡನ್ನು ಮರಳಿ ಅಟ್ಟುವಾಗ ಎರಡು ಆನೆಗಳ ಜೀವಕ್ಕೆ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಬೆಳೆದು ನಿಂತಿದ್ದ ಕಳೆ ಕಂಟಕವಾಗಿ ಪರಿಣಮಿಸಿತು.

ADVERTISEMENT

ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದ ಏಳು ಆನೆಗಳ ಹಿಂಡಿನಲ್ಲಿದ್ದ ಐದು ಆನೆಗಳು ಸುಲಭವಾಗಿ ಹಿನ್ನೀರು ದಾಟಿ ಆಚೆ ಹೋದವು. ಎರಡು ಆನೆಗಳ ಕಾಲುಗಳಿಗೆ ಕಳೆ (ಸತ್ತೆ) ಸುತ್ತಿಕೊಂಡಿದೆ. ಹಿಂದೆ, ಮುಂದೆ ಚಲಿಸಲಾಗದೆ ನೀರಿನಲ್ಲಿ ಸಿಲುಕಿ ಹಾಕಿಕೊಂಡ ಎರಡೂ ಗಂಡಾನೆಗಳು ಅಲ್ಲಿಯೇ ಪ್ರಾಣ ತೆತ್ತವು.

ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ತೆಂಗಿನಕಲ್ಲು ಅರಣ್ಯಕ್ಕೆ ಏಳು ಕಾಡಾನೆಗಳ ಹಿಂಡು ಬಂದಿತ್ತು. ಮತ್ತೆ ಬನ್ನೇರುಘಟ್ಟಕ್ಕೆ ಆನೆಗಳನ್ನು ಓಡಿಸಲು ಶುಕ್ರವಾರ ಸಂಜೆ ಆನೆ ಕಾರ್ಯಪಡೆ (ಇಟಿಎಫ್) ಕಾರ್ಯಾಚರಣೆ ಕೈಗೊಂಡಿತ್ತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಆನೆಗಳು ಹಾರೋಬೆಲೆ ಜಲಾಶಯದ ಹಿನ್ನೀರು ದಾಟಿ ಬನ್ನೇರುಘಟ್ಟ ಅರಣ್ಯಕ್ಕೆ ಹೋಗುತ್ತವೆ. ಯಥಾರೀತಿ ಏಳು ಆನೆಗಳ ಹಿಂಡು ಹಿನ್ನೀರು ದಾಟಲು ಮುಂದಾಗಿತ್ತು. ಆ ಪೈಕಿ ಐದು ಆನೆಗಳು ದಾಟಿದ್ದವು. ಉಳಿದ ಎರಡು ಆನೆಗಳು ನೀರಿನಲ್ಲಿ ಸಿಲುಕಿದ್ದವು. ಅವುಗಳಿಗಾಗಿ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ, ಎರಡು ದಿನದ ಬಳಿಕ ಆನೆಗಳು ನೀರಿನಲ್ಲಿ ಮೃತಪಟ್ಟಿರುವುದು ಸ್ಥಳೀಯರ ಮೂಲಕ ಇಲಾಖೆ ಸಿಬ್ಬಂದಿಗೆ ಗೊತ್ತಾಯಿತು ಎಂದು ಹೇಳಿದರು.

ಹಿನ್ನೀರಿನ ಮಧ್ಯೆ ಎರಡು ಆನೆಗಳ ಮೇಲ್ಮೈ ಕಾಣುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಮಾಹಿತಿ ಮೇರೆಗೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಆನೆಗಳು ಮೃತಪಟ್ಟಿರುವುದು ಗೊತ್ತಾಯಿತು. ನೀರಿನ ಮಧ್ಯೆ ಇದ್ದ ಆನೆಗಳ ಕಳೇಬರಗಳನ್ನು ಜೆಸಿಬಿ ಮೂಲಕ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿ ದಡಕ್ಕೆ ಎಳೆದು ತರಲಾಯಿತು.

ಬಳಿಕ, ಕಳೇಬರವನ್ನು ಲಾರಿಯಲ್ಲಿ ಸಿದ್ದೇಶ್ವರ ಬೆಟ್ಟ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು. ಬನ್ನೇರುಘಟ್ಟ ವನ್ಯಜೀವಿ ವಲಯದ ಡಾ. ಕಿರಣ್ ಮತ್ತು ಕನಕಪುರ ಹಲಸೂರು ಪಶು ಆರೋಗ್ಯ ಕೇಂದ್ರದ ಡಾ. ಗಿರೀಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ, ಅಂತ್ಯಕ್ರಿಯೆ ನೆರವೇರಿಸಲಾಯಿತು ಇಲಾಖೆ ಅಧಿಕಾರಿಗಳು ತಿಳಿಸಿದರು.

ಘಟನಾ ಸ್ಥಳಕ್ಕೆ ಇಲಾಖೆಯ ಎಸಿಎಫ್‌ಗಳಾದ ಚೈತ್ರಾ, ಪುಟ್ಟಮ್ಮ, ಆರ್‌ಎಫ್‌ಒಗಳಾದ ಸಿ. ರವಿ, ಮೊಹಮ್ಮದ್ ಮನ್ಸೂರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲಾಖೆಯ ಡಿಆರ್‌ಎಫ್‌ಒಗಳಾದ ಮುತ್ತುಸ್ವಾಮಿ ನಾಯ್ಕ, ಬಾಲಕೃಷ್ಣ, ಶಿವಶಂಕರ್, ಕೃಷ್ಣ ಶಿವಕುಮಾರ್, ದಿಲೀಪ್, ಸಿಬ್ಬಂದಿ ಹನುಮಂತ, ಚನ್ನವೀರ, ದಿವ್ಯ, ಸುದೀಪ್, ಶಿವು, ಆನಂದ, ಸೂರಿ, ಮನೋಜ್, ಮುನೇಶ್, ಮುನಿರಾಜು, ಸಾಗರ್, ಶಶಿಕುಮಾರ್, ಸಿದ್ದರಾಜು ಅವರು ಆನೆಗಳ ಕಳೇಬರವನ್ನು ನೀರಿನಿಂದ ಹೊರತೆಗೆಯುವ ಕಾರ್ಯಾಚರಣೆಯ ತಂಡದಲ್ಲಿದ್ದರು.

ದಾರಿ ತಪ್ಪಿದವೇ ಆನೆಗಳು...?

ಬನ್ನೇರುಘಟ್ಟದ ಅರಣ್ಯ ಪ್ರದೇಶದಿಂದ ಅಚ್ಚಲು, ಕಬ್ಬಾಳು, ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಕೂನೂರು ಬಳಿಯ ಹಾರೋಬೆಲೆ ಜಲಾಶಯದ ಹಿನ್ನೀರು ಇರುವ ಜಾಗವು ಆನೆಗಳು ಸಂಚರಿಸುವ ಮಾರ್ಗವಾಗಿದೆ. ಬನ್ನೇರುಘಟ್ಟದಿಂದ ಬರುವ ಆನೆಗಳನ್ನು ಆನೆ ಕಾರ್ಯಪಡೆಯು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದಾಗ, ಈ ಮಾರ್ಗದ ಮೂಲಕವೇ ಮತ್ತೆ ತಮ್ಮ ಆವಾಸಸ್ಥಾನಕ್ಕೆ ತೆರಳುತ್ತಿದ್ದವು. ಅದರಂತೆ, 7 ಆನೆಗಳಿದ್ದ ಹಿಂಡು ಸಹ ಹಿನ್ನೀರು ಹಾದು ಹೊರಟಿದ್ದವು. ಆದರೆ, ಆ ಪೈಕಿ ಎರಡು ಆನೆಗಳು ಮಾತ್ರ ಆಳವಾದ ನೀರಿದ್ದ ಜಾಗದಲ್ಲಿ ದಾಟಲು ಮುಂದಾಗಿದ್ದವು. ನೀರಿನ ಮಧ್ಯಕ್ಕೆ ಹೋಗಿದ್ದ ಅವುಗಳಿಗೆ ಹಿನ್ನೀರನ್ನು ಆವರಿಸಿಕೊಂಡಿರುವ ಕಳೆಯು ಸೊಂಡಿಲು, ಕಾಲುಗಳಿಗೆ ಸುತ್ತಿಕೊಂಡಿದೆ. ಹಾಗಾಗಿ, ಅವುಗಳಿಗೆ ಬಿಡಿಸಿಕೊಳ್ಳಲೂ ಆಗದೆ, ಯಾವ ಕಡೆಗೂ ಹೋಗಲಾಗದೆ ನೀರಿನಲ್ಲೇ ಮುಳುಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.