ADVERTISEMENT

ರಾಮನಗರ: ವಿದ್ಯುತ್‌ ಸ್ಪರ್ಶ, ಗಂಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 12:37 IST
Last Updated 26 ಫೆಬ್ರುವರಿ 2021, 12:37 IST
ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಕಾಡಾನೆ
ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಕಾಡಾನೆ   

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ತುಂಬೇನಹಳ್ಳಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ ಆನೆಯೊಂದು ಮೃತಪಟ್ಟಿದೆ.

ಗುರುವಾರ ರಾತ್ರಿ ಮೂರು ಆನೆಗಳ ಹಿಂಡು ರೈತರ ಜಮೀನಿಗೆ ಲಗ್ಗೆ ಇಟ್ಟಿತ್ತು. ಈ ಸಂದರ್ಭ ಜಮೀನಿನ ಟ್ರಾನ್ಸ್‌ಫಾರ್ಮರ್ ಕಂಬದ ತಂತಿಗೆ ಸೊಂಡಿಲು ತಾಗಿ 30 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ ನೇತೃತ್ವದ ತಂಡಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಯ ಮರಣೋತ್ತರ ಪರೀಕ್ಷೆ ಬಳಿಕ ಕಳೇಬರವನ್ನು ಮಣ್ಣಿನಲ್ಲಿ ಹೂಳಲಾಯಿತು.

ಬೇಸಿಗೆಯ ಹಿನ್ನೆಲೆಯಲ್ಲಿ ಕಾಡಾನೆಗಳು ಆಹಾರ–ನೀರು ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವುದು ಸಾಮಾನ್ಯವಾಗಿದೆ. ಕಳೆದ ವಾರವಷ್ಟೇ ತಾಲ್ಲೂಕಿನ ಹಂದಿಗುಂದಿ ಅರಣ್ಯ ಪ್ರದೇಶದ ಅಂಚಿನಲ್ಲಿ ಆರು ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ಅದರಲ್ಲಿ ಮೂರು ಆನೆಗಳ ಹಿಂಡು ಇದೇ ತುಂಬೇನಹಳ್ಳಿ ಭಾಗದ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸಿದ್ದವು.

ADVERTISEMENT

‘ಕಾಡಾನೆಗಳನ್ನು ಅರಣ್ಯದ ಅಂಚಿನಲ್ಲೇ ನಿಯಂತ್ರಿಸಿ ಅವುಗಳನ್ನು ವಾಪಸ್ ಕಳುಹಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲವಾಗಿದೆ. ಜೊತೆಗೆ ಬೆಸ್ಕಾಂ ನೆಲಮಟ್ಟದಲ್ಲಿ ತಂತಿ ಅಳವಡಿಸಿದ್ದು, ಇದರಿಂದ ಆನೆ ಪ್ರಾಣ ಕಳೆದುಕೊಳ್ಳುವಂತಾಗಿದೆ’ ಎಂದು ಸ್ಥಳೀಯ ರೈತರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.