ADVERTISEMENT

ರಾಮನಗರ| ಕಾಡಾನೆಗಳ ಸಾವಿನ ಸುತ್ತ: ‘ಆನೆ ಕಾರ್ಯಪಡೆ’ಗೆ ಬೇಕಿದೆ ಸೌಕರ್ಯದ ಚಿಕಿತ್ಸೆ

ನಾಡಿಗೆ ಬರುವ ಆನೆಗಳನ್ನು ಕಾಡಿಗಟ್ಟುವ ಸಿಬ್ಬಂದಿಗೆ ಬೇಕಿದೆ ಮತ್ತಷ್ಟು ಸೌಕರ್ಯ; ಅತಂತ್ರವಾಗಿರುವ ವೃತ್ತಿಗಿಲ್ಲ ಸೇವಾ ಭದ್ರತೆ

ಓದೇಶ ಸಕಲೇಶಪುರ
Published 14 ನವೆಂಬರ್ 2025, 2:19 IST
Last Updated 14 ನವೆಂಬರ್ 2025, 2:19 IST
<div class="paragraphs"><p>ಕನಕಪುರ ತಾಲ್ಲೂಕಿನ ಕೂನೂರಿನಲ್ಲಿರುವ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮೃತಪಟ್ಟ ಕಾಡಾನೆ ಕಳೇಬರವನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ&nbsp; ಇಟಿಎಫ್‌ ಸಿಬ್ಬಂದಿ</p></div>

ಕನಕಪುರ ತಾಲ್ಲೂಕಿನ ಕೂನೂರಿನಲ್ಲಿರುವ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮೃತಪಟ್ಟ ಕಾಡಾನೆ ಕಳೇಬರವನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ  ಇಟಿಎಫ್‌ ಸಿಬ್ಬಂದಿ

   

ರಾಮನಗರ: ಕಾಡಾನೆ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ಏರುಗತಿಯಲ್ಲಿರುವ ಜೀವಹಾನಿ ಹಾಗೂ ಬೆಳೆಹಾನಿ ನಿಯಂತ್ರಿಸಲು ಸರ್ಕಾರ ಆನೆ ಕಾರ್ಯಪಡೆ (ಇಟಿಎಫ್) ರಚಿಸಿದೆ. ನಾಡಿಗೆ ಬರುವ ಆನೆಗಳ ಹಿಂಡನ್ನು ಹಗಲು–ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ, ಮರಳಿ ಕಾಡಿಗಟ್ಟುವ ಕಾರ್ಯಪಡೆಗೆ ಸೌಕರ್ಯಗಳ ಚಿಕಿತ್ಸೆ ಬೇಕಿದೆ.

ಆರಂಭದಲ್ಲಿ ಜಮೀನುಗಳಿಗೆ ಬಂದು ಬೆಳೆ ತಿಂದು ಹಾನಿಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಜಮೀನು ದಾಟಿ ಊರಿಗೂ ಲಗ್ಗೆ ಇಟ್ಟಿವೆ. ನಗರ ಮತ್ತು ಪಟ್ಟಣಗಳಲ್ಲೂ ಕೆಲವೊಮ್ಮೆ ಕಾಣಿಸಿಕೊಂಡು ಆತಂಕ ಮೂಡಿಸುತ್ತಿವೆ. ಎಲ್ಲೆಂದರಲ್ಲಿ ಹಾವಳಿ ಇಡುವ ಕಾಡಾನೆಗಳನ್ನು ತಮ್ಮ ಜೀವ ಪಣಕ್ಕಿಟ್ಟು ಮರಳಿ ಕಾಡಿಗೆ ಓಡಿಸುವ ಗುತ್ತಿಗೆ ಆಧಾರದ ಇಟಿಎಫ್ ಸಿಬ್ಬಂದಿಗಿರುವುದು ಕನಿಷ್ಠ ಸೌಕರ್ಯಗಳಷ್ಟೆ.

ADVERTISEMENT

2 ವರ್ಷದ ಹಿಂದೆ ರಚನೆ:

ಜಿಲ್ಲೆಯಲ್ಲಿ ಒಂದೂವರೆ ದಶಕದಿಂದ ಆನೆಗಳ ಉಪಟಳವಿದೆ. ಅವುಗಳನ್ನು ನಿಯಂತ್ರಿಸಲು ಇಟಿಎಫ್ ರಚನೆಯಾಗಿದ್ದು ಎರಡು ವರ್ಷಗಳ ಹಿಂದೆ. 2023–24ನೇ ಸಾಲಿನಲ್ಲಿ ಆನೆ ದಾಳಿಯಿಂದಾಗಿ 7 ಮಂದಿ ಜಿಲ್ಲೆಯಲ್ಲಿ ಜೀವ ಕಳೆದುಕೊಂಡು 18 ಮಂದಿ ಗಾಯಗೊಂಡರು.

ಆನೆ ಹಾವಳಿ ಪೀಡಿತ ಪ್ರದೇಶದ ರೈತರು, ಸ್ಥಳೀಯರು ಹಾಗೂ ರೈತ ಸಂಘ ಸತತವಾಗಿ ನಡೆಸಿದ ಪ್ರತಿಭಟನೆ ಹಾಗೂ ಹೋರಾಟದ ಫಲವಾಗಿ, 2023ರಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ರೈತರ ಆಗ್ರಹದಂತೆ ಇಟಿಎಫ್ ರಚನೆ ಭರವಸೆ ನೀಡಿದರು. ಅದೇ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಇಟಿಎಫ್‌ ಘೋಷಣೆಯಾಗಿ ರಚನೆಯೂ ಆಯಿತು.

24 ಮಂದಿಯ ಇಟಿಎಫ್:

ಜಿಲ್ಲೆಯಲ್ಲಿರುವ 5 ತಾಲ್ಲೂಕುಗಳ ಪೈಕಿ ಮಾಗಡಿ ಹೊರತುಪಡಿಸಿದರೆ ಕನಕಪುರ, ಹಾರೋಹಳ್ಳಿ, ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಕಾಡಾನೆ ಹಾವಳಿ ಇದೆ. ಅದರಲ್ಲೂ ಕನಕಪುರ ಮತ್ತು ಚನ್ನಪಟ್ಟಣದಲ್ಲಿ ವಿಪರೀತವಾಗಿದೆ. ರಾಜ್ಯದಲ್ಲಿ ಕಾಡಾನೆ ಕಾಟ ಹೆಚ್ಚಾಗಿರುವ ತಾಲ್ಲೂಕುಗಳಲ್ಲಿ ಸಕಲೇಶಪುರ ಮೊದಲು ಹಾಗೂ ಕನಕಪುರ ಎರಡನೇ ಸ್ಥಾನದಲ್ಲಿದೆ. ಆದರೆ, ಜಿಲ್ಲೆಯಲ್ಲಿರುವುದು ಕೇವಲ 24 ಇಟಿಎಫ್ ಸಿಬ್ಬಂದಿ.

‘ಜಿಲ್ಲೆಗೆ ಮಂಜೂರಾಗಿರುವ 24 ಇಟಿಎಫ್‌ ಸಿಬ್ಬಂದಿ ಇದ್ದು ಅವರಿಗೆ ₹23,390 ಸಂಬಳ ನಿಗದಿಪಡಿಸಲಾಗಿದೆ. ಆರ್‌ಎಫ್‌ಒ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಇಟಿಎಫ್‌ ಜೊತೆಗೆ ಡಿಆರ್‌ಎಫ್‌ಒ, ಅರಣ್ಯ ರಕ್ಷಕರು, ಬೇಟೆ ತಡೆ ಕ್ಯಾಂಪ್‌ ಸಿಬ್ಬಂದಿ ಸೇರಿದಂತೆ ಒಟ್ಟು 74 ಮಂದಿಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವಲಯಕ್ಕೂ ತಲಾ 10 ಮಂದಿಯನ್ನು ನಿಯೋಜಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸುವ ಆನೆ ಕಾರ್ಯಪಡೆ (ಇಟಿಎಫ್) ಸಿಬ್ಬಂದಿ

‘ಆನೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯುವುದಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಆನೆ ಹಾವಳಿ ತೀರಾ ಹೆಚ್ಚಾಗಿದ್ದಾಗ ಬೇರೆ ಭಾಗದ ತಂಡವನ್ನು ಕರೆಯಿಸಿಕೊಂಡು ಕಾರ್ಯಾಚರಣೆ ನಡೆಸಲಾಗುವುದು. ಸದ್ಯ ಪ್ರತಿ ತಂಡಕ್ಕೆ ಕೇವಲ ಒಂದು ವಾಹನ ಮತ್ತು ಡ್ರೋನ್ ಕ್ಯಾಮೆರಾ ಮಾತ್ರ ಇದೆ’ ಎಂದು ಹೇಳಿದರು.

ಬೇಕಿದೆ ಸೇವಾ ಭದ್ರತೆ:

ನಾವು ಹಗಲು–ರಾತ್ರಿಯೆನ್ನದೆ, ಜೀವವನ್ನೂ ಲೆಕ್ಕಿಸದೆ ಆನೆ ಓಡಿಸುವ ಕೆಲಸ ಮಾಡುತ್ತೇವೆ. ಕನಿಷ್ಠ ಸೌಲಭ್ಯಗಳೊಂದಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನಮಗೆ ಸೇವಾ ಭದ್ರತೆ ಬೇಕಿದೆ. ಸರ್ಕಾರ ನಮ್ಮನ್ನು ಕಾಯಂ ಮಾಡಬೇಕು. ಕಾರ್ಯಾಚರಣೆಗೆ ಅಗತ್ಯ ವಾಹನಗಳು, ಡ್ರೋನ್ ಕ್ಯಾಮೆರಾ ಹಾಗೂ ಕಾರ್ಯಾಚರಣೆ ಸಂದರ್ಭದಲ್ಲಿ ಅಪಾಯದಿಂದ ರಕ್ಷಣೆ ಪಡೆಯಲು ಬಂದೂಕು ನೀಡಬೇಕು ಎಂದು ಆನೆ ಕಾರ್ಯಪಡೆ ಸಿಬ್ಬಂದಿಯೊಬ್ಬರು ಒತ್ತಾಯಿಸಿದರು.

ಸಿಬ್ಬಂದಿ ಕೊರತೆ:

ತಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊರತೆಯೇ ಆನೆ ಕಾರ್ಯಾಚರಣೆ ನಡೆಸಲು ಇಲಾಖೆಗೆ ದೊಡ್ಡ ಸವಾಲಾಗಿದೆ. ಜಿಲ್ಲೆಗೆ ಮಂಜೂರಾಗಿರುವ 62 ಫಾರೆಸ್ಟ್ ಗಾರ್ಡ್ ಹುದ್ದೆಗಳ ಪೈಕಿ, 28 ಮಾತ್ರ ಭರ್ತಿಯಾಗಿದ್ದು 34 ಖಾಲಿ ಇವೆ. ಇನ್ನು ಕಾಡಾನೆಗಳ ಚಲನವಲನ ಸೇರಿದಂತೆ ಅರಣ್ಯಗಳ ಮೇಲೆ ನಿಗಾ ಇಡುವ 31 ಅರಣ್ಯ ವೀಕ್ಷಕರ ಹುದ್ದೆ ಪೈಕಿ 7 ಮಂದಿಯಷ್ಟೆ ಇದ್ದು 24 ಹುದ್ದೆ ಖಾಲಿ ಇವೆ. ಪರಿಸ್ಥಿತಿ ಹೀಗಿರುವಾಗ ಆನೆ ಕಾರ್ಯಾಚರಣೆ ಸೇರಿದಂತೆ ಇಲಾಖೆಯ ಇತರ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುವುದಾದರೂ ಹೇಗೆ? ಎಂದು ಅಧಿಕಾರಿಗಳು ಪ್ರಶ್ನಿಸಿದರು.

ಜಿಲ್ಲೆಯಲ್ಲಿರುವ ಆನೆ ಹಾವಳಿಯ ತೀವ್ರತೆ ನೋಡಿದರೆ ಇಟಿಎಫ್‌ಗೆ ಕನಿಷ್ಠ 60 ಮಂದಿಯನ್ನಾದರೂ ಕೊಡಬೇಕು. ಕನಕಪುರ –ಹಾರೋಹಳ್ಳಿ ಹಾಗೂ ಚನ್ನಪಟ್ಟಣ ಮತ್ತು ರಾಮನಗರಕ್ಕೆ ತಲಾ 20 ಮಂದಿಯನ್ನು ನಿಯೋಜಿಸಿದರೆ ಆನೆಗಳನ್ನು ನಿಯಂತ್ರಿಸುವುದು ಸುಲಭವಾಗಲಿದೆ. ಜೊತೆಗೆ ಅಗತ್ಯ ತರಬೇತಿ ನೀಡಬೇಕು. ಆದರೆ, ಕಡಿಮೆ ಸಿಬ್ಬಂದಿ ಇರುವುದರಿಂದ ಕಾಡಾನೆ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂಬ ದೂರು ರೈತರದ್ದು.

ಎಂ. ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮನಗರ
ಆಆನೆ ಕಾರ್ಯಪಡೆ ಕಾರ್ಯಾಚರಣೆಗಾಗಿ ಕಂಪನಿಯೊಂದು 4 ವಾಹನಗಳನ್ನು ನೀಡಲು ಮುಂದೆ ಬಂದಿದೆ. ಉ‌ಳಿದಂತೆ ಇಟಿಎಫ್‌ಗೆ ಅಗತ್ಯವಿರುವ ಇತರ ಸೌಲಭ್ಯ ಮತ್ತು ಸಲಕರಣೆಗಳನ್ನು ಒದಗಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
– ಎಂ. ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ
ಕಾರ್ಯಪಡೆಗೆ ಬೇಕಿರುವುದೇನು?
ಸಾರಾಂಶ

lಕಾರ್ಯಪಡೆಗೆ ಹೊರಗುತ್ತಿಗೆ ಆಧಾರದ ಬದಲು ಕಾಯಂ ಸಿಬ್ಬಂದಿಯನ್ನು ನೇಮಕ ಮಾಡಬೇಕು.

lಕಾರ್ಯಪಡೆಗೆ ಸದ್ಯ ಒಂದು ವಾಹನವಿದ್ದು, ಇತರ ವಾಹನಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಇಟಿಎಫ್‌ ಸಿಬ್ಬಂದಿ ಓಡಾಟಕ್ಕೆ ಪ್ರತಿ ವಲಯಕ್ಕೆ ಕನಿಷ್ಠ 3 ವಾಹನಗಳನ್ನು ನೀಡಬೇಕು.

lಕಾರ್ಯಪಡೆಯ ವಾಹನಗಳ ಚಾಲನೆಗಾಗಿಯೇ ಪ್ರತ್ಯೇಕವಾಗಿ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು.

lಕಾರ್ಯಾಚರಣೆ ಮೇಲೆ ನಿಗಾ ಇಡಲು ಪ್ರತಿ ವಲಯಕ್ಕೆ ತಲಾ 2 ಡ್ರೋನ್ ಕ್ಯಾಮೆರಾ ಬೇಕು.

‘ಇಟಿಎಫ್‌ ಪ್ರತ್ಯೇಕ ವಿಭಾಗವಾಗಬೇಕು’
‘ಆನೆ ಕಾರ್ಯಪಡೆ ಅರಣ್ಯ ಇಲಾಖೆಯ ಪ್ರತ್ಯೇಕ ವಿಭಾಗವಾಗಬೇಕು. ಸದ್ಯ ಹಾಲಿ ಆರ್‌ಎಫ್‌ಒಗಳೇ ಕಾರ್ಯಾಚರಣೆಯ ನೇತೃತ್ವ ವಹಿಸಬೇಕಾಗಿದೆ. ಇದರಿಂದಾಗಿ ಅವರಿಗೆ ಕಾರ್ಯೋತ್ತಡವಾಗಿದೆ. ಕಾರ್ಯಪಡೆ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ಇಲಾಖೆಯ ಇತರ ಸಿಬ್ಬಂದಿಯನ್ನು ಸಹ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅದರ ಬದಲು ಕಾರ್ಯಪಡೆಗಾಗಿಯೇ ಪ್ರತ್ಯೇಕ ಆರ್‌ಎಫ್‌ಒ ಡಿಆರ್‌ಎಫ್‌ಒ ಅರಣ್ಯ ವೀಕ್ಷಕರು ಹಾಗೂ ಇತರ ಸಿಬ್ಬಂದಿಯನ್ನು ಅಗತ್ಯ ಸಂಖ್ಯೆಯಲ್ಲಿ ನೇಮಿಸಿಕೊಂಡು ಸೌಕರ್ಯ ಒದಗಿಸಬೇಕು’ ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಸಲಹೆ ನೀಡಿದರು.
ಸಿ. ಪುಟ್ಟಸ್ವಾಮಿ ರೈತ ಮುಖಂಡ
- ಆನೆಗೆ ಬಲಿಯಾಗಿದ್ದ ಇಟಿಎಫ್ ಸಿಬ್ಬಂದಿ
ಕನಕಪುರ ತಾಲ್ಲೂಕಿನ ಕಬ್ಬಾಳು ವ್ಯಾಪ್ತಿಯ ಕಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಆಗಸ್ಟ್‌ 12ರಂದು ಆನೆ ಕಾರ್ಯಪಡೆಯು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುವಾಗ ಕಾಡಾನೆಯೊಂದು ನಡೆಸಿದ ದಾಳಿಗೆ ಕಾರ್ಯಪಡೆ ಸಿಬ್ಬಂದಿ ಚನ್ನಪಟ್ಟಣದ ಎಲೆಕೇರಿಯ ಶ್ರೇಯಸ್ (20) ಮೃತಪಟ್ಟಿದ್ದರು. ಡಿಪ್ಲೊಮಾ ಮುಗಿಸಿದ್ದ ಅವರು ಸಾತನೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಕೈಗೊಂಡಿದ್ದಾಗ ಘಟನೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.