ADVERTISEMENT

ಹಾರೋಹಳ್ಳಿ: ಕಾಡಾನೆ ತುಳಿದು ರೈತ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:12 IST
Last Updated 30 ಅಕ್ಟೋಬರ್ 2025, 2:12 IST
ವೆಂಕಟಾಚಲಯ್ಯ
ವೆಂಕಟಾಚಲಯ್ಯ   

ಹಾರೋಹಳ್ಳಿ: ಅರಣ್ಯದಲ್ಲಿ ದನ ಮೇಯಿಸುತ್ತಿದ್ದ ರೈತರೊಬ್ಬರು ಕಾಡಾನೆ ದಾಳಿಗೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟಾಚಲಯ್ಯ(65) ಮೃತರು.

ಊರಿಗೆ ಹೊಂದಿಕೊಂಡಂತಿರುವ ಅರಣ್ಯದಂಚಿನಲ್ಲಿ ವೆಂಕಟಾಚಲಯ್ಯ ಅವರು ಬೆಳಿಗ್ಗೆ 10.30ರ ಸುಮಾರಿಗೆ ದನ ಮೇಯಿಸುತ್ತಿದ್ದರು. ಆಗ ಏಕಾಏಕಿ ಬಂದ ಒಂಟಿ ಸಲಗವೊಂದು ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಗ್ರಾಮದಂಚಿನಲ್ಲಿ ಕಾಣಿಸಿಕೊಂಡ ಆನೆಯನ್ನು ಗಮನಿಸಿದ ಸ್ಥಳೀಯರು, ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದಾಗ ವೆಂಕಟಚಾಲಯ್ಯ ಅವರ ಶವ ಸಿಕ್ಕಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಎಸಿಎಫ್ ರವಿಕುಮಾರ್, ಆರ್‌ಎಫ್‌ಒ ಬಿಂದು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಶವಸಂಸ್ಕಾರಕ್ಕೆ ನಿರಾಕರಣೆ: ಗ್ರಾಮ ಸೇರಿದಂತೆ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡುವುದೇ ಕಷ್ಟವಾಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜೊತೆಗೆ ಆನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಘಟನೆಯು ಅರಣ್ಯದಲ್ಲಿ ನಡೆದಿರುವುದರಿಂದ ಪರಿಹಾರ ಸಿಗುವುದು ಅನುಮಾನವಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದರು. ಹಾಗಾಗಿ, ಮೇಲಧಿಕಾರಿಗಳು ಬಂದು ಪರಿಹಾರದ ಭರವಸೆ ನೀಡುವವರೆಗೆ ಶವದ ಮರಣೋತ್ತರ ಪರೀಕ್ಷೆ ಮತ್ತು ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.

‘ಗ್ರಾಮಸ್ಥರು ಸಂಜೆವರೆಗೆ ಕಾದರೂ ಮೇಲಧಿಕಾರಿಗಳು ಬಂದಿಲ್ಲ. ನಾಳೆ ಸ್ಥಳಕ್ಕೆ ಶಾಸಕರು, ಸಂಸದರು, ಮಾಜಿ ಸಂಸದರು ಹಾಗೂ ಅಧಿಕಾರಿಗಳು ಬಂದು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಬಳಿಕವೇ ಅಂತ್ಯಸಂಸ್ಕಾರ ಮಾಡುತ್ತೇವೆ’ ಎಂದು ಗ್ರಾಮಸ್ಥ ಅರ್ಜುನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ವೆಂಕಟಾಚಲಯ್ಯ ಅವರ ಶವ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿದೆ. ಗ್ರಾಮದ ಹಿರಿಯರಾಗಿದ್ದ ವೆಂಕಟಾಚಲಯ್ಯ ಅವರು, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಮೀನು ದಾನವಾಗಿ ನೀಡಿದ್ದರು ಎಂದು ಗ್ರಾಮಸ್ಥರು ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.