ADVERTISEMENT

ರಾಮನಗರ | ‘ಪರಿಸರ ಸಂರಕ್ಷಣೆ ಒಂದು ದಿನಕ್ಕೆ ಸೀಮಿತವಾಗದಿರಲಿ’

ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ; ನಗರದಲ್ಲಿ ಜಾಗೃತಿ ಜಾಥಾ; ಸಸಿ ನೆಟ್ಟ ಗಣ್ಯರು, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 5:52 IST
Last Updated 6 ಜೂನ್ 2024, 5:52 IST
ರಾಮನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ರಾಮನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ರಾಮನಗರ: ‘ಪರಿಸರ ಸಂರಕ್ಷಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಮ್ಮ ಬದುಕಿನ ಭಾಗವಾಗಿ ಪ್ರತಿ ದಿನವೂ ನಾವು ಪರಿಸರ ಕಾಳಜಿ ಮಾಡಬೇಕು. ಪ್ರಕೃತಿಗೆ ಪೂರಕವಾಗಿ ನಾವು ಬದುಕಬೇಕೇ ಹೊರತು, ಅದು ನಮಗೆ ಪೂರಕವಾಗಿರುವುದಿಲ್ಲ. ನಮ್ಮ ಅಭಿವೃದ್ಧಿ ಚಟುವಟಿಕೆಗಳಿಂದ ಪ್ರಕೃತಿಗೆ ಹಾನಿಯುಂಟಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಸಹಯೋಗದಲ್ಲಿ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಸಿರಿನ ಮಹತ್ವವನ್ನು ಜಗತ್ತಿನಲ್ಲೆಡೆ ಸಾರುವುದಕ್ಕಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಪ್ರಾಮುಖ್ಯತೆಯನ್ನು ಆರಂಭದಿಂದಲೇ ಮಕ್ಕಳಿಗೆ ಹೇಳಿ ಕೊಡಬೇಕು. ಚಿಕ್ಕಂದಿನಿಂದಲೇ ಅವರಲ್ಲಿ ಪರಿಸರ ಸಂರಕ್ಷಣೆಯ ಮನೋಭಾವ ಬೆಳೆಸಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ನಾವು ನೋಡಿದ ಪ್ರಕೃತಿಯನ್ನು ಬಿಟ್ಟು ಹೋಗಲು ಸಾಧ್ಯ’ ಎಂದರು.

ADVERTISEMENT

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಮಾತನಾಡಿ, ‘ಪ್ರಕೃತಿಯಿಂದ ಎಲ್ಲವನ್ನು ಪಡೆದುಕೊಳ್ಳುವ ನಾವು ಅದಕ್ಕೆ ಕೃತಜ್ಞರಾಗಿರಬೇಕು. ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಏರುತ್ತಿರುವ ತಾಪಮಾನ, ನಿರಂತರ ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯವನ್ನು ಪರಿಸರ ಎದುರಿಸುತ್ತಿದೆ. ಈ ಸಮಸ್ಯೆಗಳು ತಾರಕಕ್ಕೇರಿ ಮನುಕುಲಕ್ಕೆ ಕುತ್ತು ಬರುವುದಕ್ಕೆ ಮುಂಚೆಯೇ ನಾವು ಪರಿಹಾರೋಪಾಯ ಕಂಡುಕೊಳ್ಳಬೇಕು’ ಎಂದು ಹೇಳಿದರು.

‘ತಂತ್ರಜ್ಞಾನದ ಪ್ರಭಾವದಿಂದಾಗಿ ಪೃಕೃತಿಯೊಂದಿಗಿನ ಮಕ್ಕಳ ಒಡನಾಟ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇಂದಿನ ಮಕ್ಕಳು ನಮ್ಮ ಸುತ್ತಮುತ್ತಲಿನ ಯಾವುದಾದರೂ ಕನಿಷ್ಟ ಐದು ಸಸ್ಯಗಳ ಹೆಸರು ಹೇಳದ ಸ್ಥಿತಿಯಲ್ಲಿದ್ದಾರೆ. ಪರಿಸರದೊದಿಗೆ ಪರಿಸರ ಸ್ನೇಹಿಯಾಗಿ ಬೆಳೆದು ದೊಡ್ಡವರಾಗಬೇಕಿದ್ದ ಮಕ್ಕಳು ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದಾರೆ. ಹೀಗಾಗಿ, ಮಕ್ಕಳಲ್ಲಿ ಪರಿಸರ ಕಾಳಜಿ ಕ್ಷೀಣಿಸುತ್ತಿದೆ. ಪ್ರಕೃತಿ ರಕ್ಷಣೆ ದೃಷ್ಟಿಯಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕಿದೆ’ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಕೆ.ಜೆ, ‘ವರ್ಷದಿಂದ ವರ್ಷಕ್ಕೆ ಅರಣ್ಯದ ವ್ಯಾಪ್ತಿ ಕಡಿಮೆಯಾಗುತ್ತಿರುವುದು ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕಿದೆ. ತಾಪಮಾನದ ಏರಿಕೆಯ ಪರಿಣಾಮಗಳನ್ನು ತಡೆಯುವುದಕ್ಕಾಗಿ ಹಸಿರೀಕರಣ ಹೆಚ್ಚಿಸಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ಒ ಡಾ. ರಾಜು, ಡಿಎಲ್‌ಒ ಡಾ. ಮಂಜುನಾಥ್, ಡಿಟಿಒ ಡಾ. ಕುಮಾರ್, ಮುಖ್ಯ ಶಿಕ್ಷಕ ಶಿವಸ್ವಾಮಿ, ಆರೋಗ್ಯ ಮೇಲ್ವಿಚಾರಕ ವಿಶ್ವೇಶ್ವರಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಂದ್ರ, ಜಿಲ್ಲಾ ಕೀಟಶಾಸ್ತ್ರಜ್ಞೆ ಸೌಮ್ಯ, ಆರೋಗ್ಯ ಸಿಬ್ಬಂದಿ, ಶಾಲಾ ಮಕ್ಕಳು ಇದ್ದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ರಾಮನಗರದ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಬುಧವಾರ ಸಸಿ ನೆಟ್ಟು ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಿದರು. ಜಿ.ಪಂ. ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ
ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ಬುಧವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನದ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ನ್ಯಾ. ನಿಂಗಪ್ಪ ಪರಶುರಾಮ ಕೊಪರ್ಡೆ ಅವರು ಸಸಿ ನೆಟ್ಟರು. ರಾಮನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ನಿಜಾಮುದ್ದೀನ್ ಹಾಗೂ ಇತರರು ಇದ್ದಾರೆ
ರಾಮನಗರದ ಬಸವನಪುರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಅವರು ಸಸಿ ನೆಟ್ಟರು. ಕಾಲೇಜಿನ ಸಿಬ್ಬಂದಿ ಇದ್ದಾರೆ
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಜೋಗರದೊಡ್ಡಿಯಲ್ಲಿರುವ ಕೆನರಾ ಬ್ಯಾಂಕ್ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರನೆಯಲ್ಲಿ ಸಂಸ್ಥೆ ನಿರ್ದೇಶಕರಾದ ಶಿವರಾಮ್ ಕೆ. ಹಾಗೂ ವಿದ್ಯಾರ್ಥಿಗಳು ಸಸಿ ನೆಟ್ಟರು. ಸಂಸ್ಥೆ ಸಿಬ್ಬಂದಿ ಸಿದ್ದಪ್ಪ ಚಂದ್ರಶೇಖರ್ ನರೇಶ್ ಕುಮಾರ್ ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದಾರೆ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮನಗರದಲ್ಲಿ ಬುಧವಾರ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಬೈರೇಗೌಡ ಪ್ರಧಾನ ಕಾರ್ಯದರ್ಶಿ ಬಾಬು ಹಾಗೂ ಕಾರ್ಯಕರ್ತರು ರಸ್ತೆ ಬದಿ ಸಸಿ ನೆಟ್ಟರು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಬುಧವಾರ ಜಾಗೃತಿ ಜಾಥಾ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.