ADVERTISEMENT

ಪರಿಸರ ಜಾಗೃತಿಗೆ ಚನ್ನಪಟ್ಟಣದಲ್ಲಿ ವಿಭಿನ್ನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:36 IST
Last Updated 6 ಜೂನ್ 2020, 15:36 IST
ಅಕ್ಷರ ಬರೆದಿರುವ ಬಾಟಲ್
ಅಕ್ಷರ ಬರೆದಿರುವ ಬಾಟಲ್   

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಕೆ.ಎಂ.ಶಿವಕುಮಾರ್ ಅವರು ಒಂದು ಲೀಟರ್ ಪ್ಲಾಸ್ಟಿಕ್‌ ಬಾಟಲ್ ಮೇಲೆ ‘ಡೋಂಟ್ ಯೂಸ್ ಪ್ಲಾಸ್ಟಿಕ್' ಮತ್ತು ‘ಇಂಡಿಯಾ' ಎಂಬ ಪದವನ್ನು 30,041 ಬಾರಿ ಬರೆದು ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ.

‘ವಿಶ್ವ ಪರಿಸರ ದಿನದಂದು ವಿಭಿನ್ನವಾಗಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಮಾಡಿದ್ದೇನೆ. ಇಂತಹ ಪ್ರಯತ್ನದಿಂದ ಪರಿಸರದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿದರೆ ಸಾಕು ಎನ್ನುವುದು ನನ್ನ ಉದ್ದೇಶವಾಗಿದೆ‘ ಎನ್ನುತ್ತಾರೆ ಶಿವಕುಮಾರ್.

ಶಿವಕುಮಾರ್ ಅಂತರರಾಷ್ಟ್ರೀಯ ಯೋಗಪಟು ಕೂಡ. 2019ರಲ್ಲಿ ಥಾಯ್ಲೆಂಡ್ ಹಾಗೂ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

ADVERTISEMENT

ಬಿ.ಕಾಂ ಪದವೀಧರರಾದ ಶಿವಕುಮಾರ್ ಸದ್ಯ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಫೂರ್ತಿ ಸೇವಾ ಸಂಸ್ಥೆ ಹುಟ್ಟು ಹಾಕಿರುವ ಅವರು ಅದರ ಮೂಲಕ ರಾಜ್ಯದ ವಿವಿಧೆಡೆ ಶಾಲಾ– ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಿವಿಧೆಡೆ ನಡೆದ ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. 2017ರಲ್ಲಿ ಉತ್ತಮ ಭಾಷಣಗಾರ ಪ್ರಶಸ್ತಿ ಮತ್ತು 2018ರಲ್ಲಿ ಅತ್ಯುತ್ತಮ ಭಾಷಣಗರ ಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.