ADVERTISEMENT

ಬೆಳೆ ವಿಮೆಗೆ ರೈತರ ನಿರುತ್ಸಾಹ: ಮನೆಮನೆ ಪ್ರಚಾರಕ್ಕಿಳಿದ ಕೃಷಿ ಇಲಾಖೆ ಸಿಬ್ಬಂದಿ

ಅರಿವು ಮೂಡಿಸುವ ಯತ್ನ

ಆರ್.ಜಿತೇಂದ್ರ
Published 6 ಆಗಸ್ಟ್ 2019, 19:45 IST
Last Updated 6 ಆಗಸ್ಟ್ 2019, 19:45 IST
ಬೆಳೆ ವಿಮೆ ಬಗ್ಗೆ ಆಟೊ ಪ್ರಚಾರ ಮಾಡುತ್ತಿರುವ ಕೃಷಿ ಇಲಾಖೆ ಸಿಬ್ಬಂದಿ
ಬೆಳೆ ವಿಮೆ ಬಗ್ಗೆ ಆಟೊ ಪ್ರಚಾರ ಮಾಡುತ್ತಿರುವ ಕೃಷಿ ಇಲಾಖೆ ಸಿಬ್ಬಂದಿ   

ರಾಮನಗರ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಇದ್ದರೆ, ರಾಮನಗರ ಜಿಲ್ಲೆಯಲ್ಲಿ ಬರ ಆವರಿಸಿದೆ. ಆದಾಗ್ಯೂ ರೈತರು ಬೆಳೆ ವಿಮೆ ಮಾಡಿಸಲು ಆಸಕ್ತಿ ತೋರುತ್ತಿಲ್ಲ.

ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯ ಅಡಿ ಪ್ರಸಕ್ತ ಮುಂಗಾರಿಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸದ್ಯ ರಾಗಿ ಮತ್ತು ಹುರುಳಿ ಹೊರತುಪಡಿಸಿ ಉಳಿದೆಲ್ಲ ಬೆಳೆಗಳ ವಿಮೆ ಅವಧಿ ಮುಗಿದಿದೆ. ಆದಾಗ್ಯೂ ಈವರೆಗೆ ಕೇವಲ 1938 ರೈತರು ಮಾತ್ರ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಶೇ 70ರಷ್ಟು ಕೃಷಿ ಯೋಗ್ಯ ಭೂಮಿಯಲ್ಲಿ ಇದನ್ನೇ ಬೆಳೆಯಲಾಗುತ್ತಿದೆ. ಈ ಬೆಳೆಗೆ ವಿಮೆ ಮಾಡಿಸಲು ಇದೇ ತಿಂಗಳ 14 ಕಡೆಯ ದಿನವಾಗಿದೆ. ಇನ್ನೂ ವಾರದ ಕಾಲಾವಕಾಶ ಇದೆ. ಕಡೆಯ ಕ್ಷಣದಲ್ಲಿ ರೈತರು ಮನಸ್ಸು ಮಾಡಬಹುದು ಎಂಬ ಭರವಸೆಯೊಂದಿಗೆ ಕೃಷಿ ಅಧಿಕಾರಿಗಳು ಕೃಷಿಕರ ಮನವೊಲಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಹಿನ್ನಡೆ ಯಾಕೆ?: ಕಳೆದ ಮುಂಗಾರಿನಲ್ಲಿ ಜಿಲ್ಲೆಯ 1.14 ಲಕ್ಷ ಹೆಕ್ಟೇರ್‌ ಕೃಷಿ ಯೋಗ್ಯ ಭೂಮಿಯ ಪೈಕಿ ಕೇವಲ 1900 ಹೆಕ್ಟೇರ್‌ನಷ್ಟು ಕೃಷಿ ಭೂಮಿ ಮಾತ್ರ ವಿಮೆಗೆ ಒಳಪಟ್ಟಿತ್ತು.

2016–17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೇವಲ 671 ರೈತರು ಮಾತ್ರ ವಿಮೆ ಮಾಡಿಸಿದ್ದರು. ಆ ವರ್ಷ ಮುಂಗಾರು ಮಳೆ ಮಳೆ ಕೈಕೊಟ್ಟಿದ್ದು, ಬರಗಾಲದ ಪರಿಸ್ಥಿತಿ ಎದುರಾಗಿತ್ತು. ಪರಿಣಾಮವಾಗಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮೆ ಪರಿಹಾರ ಸಿಕ್ಕು ನಿಟ್ಟುಸಿರು ಬಿಟ್ಟಿದ್ದರು. ಇದರಿಂದ ಉತ್ತೇಜನಗೊಂಡ ಇತರ ರೈತರು 2017–18ನೇ ಸಾಲಿನ ಮುಂಗಾರಿನಲ್ಲಿ ಭಾರಿ ಸಂಖ್ಯೆಯಲ್ಲಿ ವಿಮೆ ನೋಂದಣಿ ಮಾಡಿದ್ದರು. ಆದರೆ ಉತ್ತಮ ಮಳೆಯಾಗಿ ಫಸಲು ಕೈಸೇರಿದ ಕಾರಣ ಯಾರಿಗೂ ಪರಿಹಾರ ದೊರೆಯಲಿಲ್ಲ. ಕಳೆದ ವರ್ಷವೂ ತಕ್ಕ ಮಟ್ಟಿಗೆ ಮಳೆಯಾದ ಕಾರಣ ಹೆಚ್ಚಿನ ರೈತರಿಗೆ ವಿಮೆ ಸೌಲಭ್ಯ ದೊರೆತಿಲ್ಲ. ಹೀಗಾಗಿ ರೈತರು ವಿಮೆ ಬಗ್ಗೆ ಆಸಕ್ತಿ ಕಳೆದುಕೊಂಡಂತಿದೆ.

ಎಲ್ಲಿ ಕಡಿಮೆ: ಚನ್ನಪಟ್ಟಣ ತಾಲ್ಲೂಕಿನ ರೈತರು ವಿಮೆಗೆ ಅಷ್ಟು ಆಸಕ್ತಿ ತೋರಿಲ್ಲ. ರಾಮನಗರ ತಾಲ್ಲೂಕು ಸಹ ಬೆಳೆ ವಿಮೆಯಲ್ಲಿ ಹಿಂದೆ ಬಿದ್ದಿದೆ. ಕನಕಪುರ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ತಕ್ಕಮಟ್ಟಿಗೆ ರೈತರು ವಿಮೆ ಮಾಡಿಸಲು ಮುಂದೆ ಬಂದಿದ್ದಾರೆ.

‘ಸಂಕಷ್ಟದ ಕಾಲದಲ್ಲಿ ವಿಮೆ ರೈತರ ಕೈಹಿಡಿಯುತ್ತದೆ. ಮಳೆ ಬಿದ್ದರೆ ಎಲ್ಲರಿಗೂ ಅನುಕೂಲ. ಆದರೆ ಮಳೆಯಾಗದೇ ಇದ್ದರೆ ಬಿತ್ತಿದ ರಾಗಿಯೂ ಉಳಿಯುವುದು ಅನುಮಾನವಾಗಿದೆ. ಹೀಗಾಗಿ ರೈತರು ಸಾಧ್ಯವಾದಷ್ಟು ವಿಮೆಗೆ ಆಸಕ್ತಿ ತೋರಬೇಕು. ಮಳೆಯಾಶ್ರಿತ ರಾಗಿಗೆ ಎಕರೆಗೆ ₹307 ವಿಮೆ ಕಂತನ್ನಷ್ಟೇ ರೈತರು ತುಂಬಬೇಕು. ಸಂಪೂರ್ಣ ಬೆಳೆ ನಷ್ಟವಾದಲ್ಲಿ ಹೆಕ್ಟೇರ್‌ಗೆ ₨38 ಸಾವಿರದವರೆಗೂ ಪರಿಹಾರ ಸಿಗಲಿದೆ. ಬೆಳೆಯ ನಷ್ಟದ ಪ್ರಮಾಣದ ಮೇಲೆ ವಿಮೆ ಪರಿಹಾರ ನಿರ್ಧಾರವಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ.

ಪ್ರಚಾರಕ್ಕೆ ಒತ್ತು
ರೈತರಲ್ಲಿ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕರಪತ್ರಗಳನ್ನು ಮುದ್ರಿಸಿ ಹಳ್ಳಿಕಟ್ಟೆಗಳು, ಡೇರಿಗಳ ಬಳಿ ರೈತರಿಗೆ ಹಂಚಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಆಟೊಗಳಲ್ಲಿ ಮೈಕ್‌ ಹಿಡಿದು ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದೆ.

ಮಳೆ ತಂದ ಭರವಸೆ
ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನದ ನಂತರ ತುಂತುರು ಮಳೆ ಸುರಿದಿದ್ದು, ರೈತರಲ್ಲಿ ಭರವಸೆ ಮೂಡಿಸಿದೆ. ರಾಮನಗರದಲ್ಲಿ ಮಧ್ಯಾಹ್ನ ಸಾಧಾರಣ ಮಳೆಯಾಗಿದ್ದು, ನಂತರದಲ್ಲೂ ತುಂತುರು ಮುಂದುವರಿದಿತ್ತು. ಜಿಲ್ಲೆಯಲ್ಲಿ ಈವರೆಗೆ ಕೇವಲ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಉತ್ತಮ ಮಳೆಯಾದಲ್ಲಿ ಈ ಪ್ರಮಾಣ ಹೆಚ್ಚಲಿದೆ.

*
ರಾಗಿಗೆ ವಿಮೆ ಮಾಡಿಸಲು ಇದೇ 14ರವರೆಗೆ ಅವಕಾಶ ಇದೆ. ಬರ ಪರಿಸ್ಥಿತಿ ಎದುರಾದಲ್ಲಿ ವಿಮೆಯು ರೈತರ ಕೈ ಹಿಡಿಯಲಿದೆ
–ಕೆ.ಎಚ್. ರವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ಮುಂಗಾರು ಬೆಳೆ ವಿಮೆ ಮಾಹಿತಿ
ವರ್ಷ:
2016–17
671– ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರು
₹2.69 ಲಕ್ಷ– ರೈತರು ಪಾವತಿಸಿದ ವಿಮೆ ಕಂತಿನ ಮೊತ್ತ
₹82.51 ಲಕ್ಷ– ರೈತರಿಗೆ ಬೆಳೆ ಪರಿಹಾರವಾಗಿ ದೊರೆತ ಒಟ್ಟು ಮೊತ್ತ

ವರ್ಷ: 2017–18
14,118– ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರು
₹85.65 ಲಕ್ಷ– ರೈತರು ಪಾವತಿಸಿದ ವಿಮೆ ಕಂತಿನ ಮೊತ್ತ

ವರ್ಷ: 2018–19
1436– ಜಿಲ್ಲೆಯಲ್ಲಿ ವಿಮೆ ಮಾಡಿಸಿದ ರೈತರು
₹5.91 ಲಕ್ಷ– ಪಾವತಿಯಾದ ವಿಮೆ ಕಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.