ADVERTISEMENT

ಚನ್ನಪಟ್ಟಣ | ರೈತರಿಂದ ಭೂಮಿ ಕಿತ್ತುಕೊಂಡರೆ ಸುಮ್ಮನಿರಲ್ಲ: ರೈತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 6:50 IST
Last Updated 29 ಆಗಸ್ಟ್ 2024, 6:50 IST
ಚನ್ನಪಟ್ಟಣ ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿರುವ ಸಾಗುವಳಿ ಭೂಮಿಯಲ್ಲಿ ನಿವೇಶನ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣ ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿರುವ ಸಾಗುವಳಿ ಭೂಮಿಯಲ್ಲಿ ನಿವೇಶನ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿರುವ ಸಾಗುವಳಿ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ನಿವೇಶನ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಗ್ರಾಮದ ರೈತರು, ರೈತ ಸಂಘಟನೆ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಹಿಂದಿನಿಂದಲೂ ಈ ಭೂಮಿಯಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸಾಗುವಳಿ ಚೀಟಿ ಸಹ ನೀಡಲಾಗಿದೆ. ಆದರೆ ಜಿಲ್ಲಾಡಳಿತವು ಇದನ್ನು ಸರ್ಕಾರಿ ಗೋಮಾಳ ಎಂದು ವಶಪಡಿಸಿಕೊಂಡು, ನಿವೇಶನ ಮಾಡಿ ಹಂಚಲು ಮುಂದಾಗಿದೆ, ಇದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದ ಮುಖಂಡ ಪ್ರಸನ್ನ ಪಿ.ಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ನಿವೇಶನವಿಲ್ಲದ, ಬಡ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಸಾಗುವಳಿ ಮಾಡುತ್ತಿರುವ ಜಾಗವನ್ನು ಕಿತ್ತುಕೊಂಡು, ನಿವೇಶನ ಮಾಡುವುದು ನ್ಯಾಯವಲ್ಲ. ಅದರ ಬದಲು ಖಾಸಗಿ ಜಮೀನು ಖರೀದಿಸಿ ನಿವೇಶನ ಮಾಡಲಿ. ಸಾಗುವಳಿ ಭೂಮಿಗೆ ಕೈಹಚ್ಚಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಗ್ರಾ.ಪಂ. ಮಾಜಿ ಅಧ್ಯಕ್ಷ ಉಜ್ಜನಹಳ್ಳಿ ಪ್ರಭು ಮಾತನಾಡಿ, ‘ಭೂಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 400 ಜನಕ್ಕೆ ನಿವೇಶನವಿಲ್ಲ. ಅವರಿಗೆಲ್ಲಾ ನಿವೇಶನ ಸಿಗುವಂತಾಗಬೇಕು. ಆದರೆ, ಅದಕ್ಕಾಗಿ ರೈತರನ್ನು ಒಕ್ಕಲೆಬ್ಬಿಸಲು ಬಂದರೆ ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ರೈತಮುಖಂಡ ರಘುಸ್ವಾಮಿ, ಸ್ಥಳೀಯ ಮುಖಂಡರಾದ ಚೌಡೇಗೌಡ, ಪುಟ್ಟಚಂದ್ರೇಗೌಡ, ದಿನೇಶ್ ರಾವ್, ಬಾಬು ರಾವ್, ರಾಮರಾವ್, ರಾಮಚಂದ್ರರಾವ್, ಪಾರ್ವತಮ್ಮ, ರಾಜಶೇಖರ್, ಸುಂದ್ರಮ್ಮ ಚನ್ನೇಗೌಡ, ಉಜ್ಜನಹಳ್ಳಿ ಸುರೇಶ್, ಯು.ಬಿ. ಕೃಷ್ಣೇಗೌಡ, ಸಂಪತ್, ಭೂಹಳ್ಳಿ ತಮ್ಮಣ್ಣ, ಪಿ.ಹಳ್ಳಿ ದೊಡ್ಡಿ ಶಿವರಾಜು, ಹರೀಶ್, ಭೂಹಳ್ಳಿ ರೇವಣ್ಣ, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.