ADVERTISEMENT

ರಾಮನಗರ | ಕಲಾ ಪ್ರದರ್ಶನಕ್ಕೆ ಸಿಗಬೇಕಿದೆ ವೇದಿಕೆ: ಆದಿತ್ಯ ನಂಜರಾಜ್

ಲೋಕ ಸಿರಿ: ಮಣೇವು ಆಚರಣೆ ಮೂಲಕ ಕಳೆಗಟ್ಟಿದ ಜಾನಪದ ಲೋಕ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:35 IST
Last Updated 17 ಸೆಪ್ಟೆಂಬರ್ 2025, 2:35 IST
   

ರಾಮನಗರ: ‘ಜಾನಪದ ಕಲಾವಿದರು ತಮ್ಮ ಕಲೆಯಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲು ದೊಡ್ಡ ಮಟ್ಟದ ವೇದಿಕೆಗಳು ಸಿಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮವಾಗಬೇಕು. ಆಗ ಮಾತ್ರ ಕಲೆ ಜೊತೆಗೆ ಕಲಾವಿದರು ಸಹ ಉಳಿಯಲಿದ್ದಾರೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಅಭಿಪ್ರಾಯಪಟ್ಟರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ಲೋಕಸಿರಿ-109 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾನಪದ ಲೋಕವು ಕಲೆ ಮತ್ತು ಕಲಾವಿದರಿಗಾಗಿ ಮುಡಿಪಾಗಿದೆ. ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಶ್ರಮದಿಂದಾಗಿ ಇಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ’ ಎಂದರು.

ಪರಿಷತ್ತಿನ ಆಡಳಿತ ಮಂಡಳಿ ಸದಸ್ಯ ಡಾ. ಜಿ. ಕೃಷ್ಣರಾಜ್ ಮಾತನಾಡಿ, ‘ನಾಗೇಗೌಡರು ಕಟ್ಟಿದ ಜಾನಪದ ಲೋಕವು ನಾಡಿಗೆ ಹೆಮ್ಮೆಯಾಗಿದೆ. ಯಾವ ವಿಶ್ವವಿದ್ಯಾಲಯವೂ ಮಾಡದಷ್ಟು ಕೆಲಸವನ್ನು ಜಾನಪದ ಲೋಕವು ಮಾಡಿದೆ. ನಾಡಿನಾದ್ಯಂತ ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸಿ, ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

ಪತ್ರಕರ್ತ ಸು.ನಾ. ನಂದಕುಮಾರ್, ‘ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಜಾನಪದ ಲೋಕ ಮಾಡುತ್ತಿದೆ. ಲೋಕದ ಕಾರಣಕ್ಕೆ ಇಂದು ಎಷ್ಟೋ ಕಲಾವಿದರು ಕಾರ್ಯಕ್ರಮಗಳ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜಾನಪದ ಕಲೆಗಳು ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಜಾನಪದ ಲೋಕದ ಕೊಡುಗೆ ದೊಡ್ಡದು’ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಕಲಾವಿದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕನ್ನಮೇಡಿ ಅಂಚೆಯ ವೀರ್ಲಗೊಂದಿ ಕಾಡುಗೊಲ್ಲರ ಹಟ್ಟಿಯ ಮಣೇವು ಕುಣಿತ ಕಲಾವಿದ ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು. ಬಳಿಕ ಚಿಕ್ಕಣ್ಣ ಅವರು, ಮಣೇವು ಕುಣಿತದ ಆಚರಣೆಯ ವಿಧಿವಿಧಾನಗಳ ಬಗ್ಗೆ ವಿವರಿಸಿದರು.

ಜುಂಜಪ್ಪ ವೀರಬೋರಣ್ಣ ಮತ್ತು ಸಮುದಾಯದ ವೀರನಾಯಕರ ಯಾಳದ ಪದಗಳನ್ನು ಹಾಡುತ್ತಾ ತಂಡದವರಿಗೆ ಕುಣಿಯಲು ಹುರಿದುಂಬಿಸಿದರು.
ಚಪ್ಪಾಳೆ ಕೇಕೆಗಳ ಮೂಲಕ ಕಲಾಸಕ್ತರನ್ನು ರಂಜಿಸಿದರು. 25ಕ್ಕೂ ಹೆಚ್ಚು ಕಲಾವಿದರು ಅರೆ ವಾದ್ಯಗಳ ಮೇಳಕ್ಕೆ ಮಣೇವು ಕುಣಿತದ ವರಸೆಗಳಾದ ಒಂದು ಬಾಗಿನ ಮಣೇವು, ಎರಡು ಬಾಗಿನ ಮಣೇವು, ಕತ್ತರಿ ಮಣೇವು ಪ್ರದರ್ಶಿಸಿದರು.

ವಿಭೂತಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನೀತಾ ನಾಗರಾಜ್ ಸಿಂಗ್ ಉಪಸ್ಥಿತರಿದ್ದರು. ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಕ್ಯೂರೇಟರ್ ಡಾ. ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿ ಕೊಟ್ಟರು. ರಂಗ ಸಹಾಯಕ ಪ್ರದೀಪ್ ನಿರೂಪಣೆ ಮಾಡಿದರು. ಸಂಶೋಧನಾ ಸಂಚಾಲಕ ಡಾ. ಸಂದೀಪ್ ಕೆ.ಎಸ್, ನಾಗರಾಜ್ ಸಿಂಗ್, ಡಿಪ್ಲೊಮ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ಕಲಾವಿದರು ಪ್ರದರ್ಶಿಸಿದ ಮಣೇವು ಕುಣಿತ ಪ್ರೇಕ್ಷಕರ ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.