ರಾಮನಗರ: ‘ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಜಾನಪದ ಎಂದಿಗೂ ಅನ್ನ ನೀಡುವ ಕಲೆಯಾಗಲಿಲ್ಲ. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬದಲಾದ ಸ್ಥಿತಿಯಲ್ಲಿ ನಾವು ಅನ್ನದ ಕಲೆಯಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ಹಾಗೂ ಕಾರ್ಯಪ್ರವೃತ್ತವಾಗಬೇಕಿದೆ. ಇಲ್ಲದಿದ್ದರೆ, ಕಲೆಗಳಿಗೆ ಉಳಿಗಾಲವಿಲ್ಲ’ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಆತಂಕ ವ್ಯಕ್ತಪಡಿಸಿದರು.
ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲೆ ಪ್ರದರ್ಶಿಸುವ ಕಲಾವಿದರ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಮತ್ತು ಲೇಖನ ಪ್ರಕಟವಾದರೂ, ಅದರಿಂದ ಹೊಟ್ಟೆ ತುಂಬುತ್ತಿಲ್ಲ. ನಮ್ಮಂತಹ ವಿದ್ವಾಂಸರು ಕಲೆ ಮತ್ತು ಸಾಹಿತ್ಯದ ಹೆಸರಿನಲ್ಲಿ ಕೆಲಸ ಮಾಡಿ ಹಣ, ಅಧಿಕಾರದ ಜೊತೆಗೆ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತೇವೆ. ಆದರೆ, ಕಲಾವಿದರ ಪರಿಸ್ಥಿತಿ ಬೇರೆಯೇ ಇದೆ’ ಎಂದರು.
‘ಜಾನಪದ ಲೋಕ ಆರಂಭದಿಂದಲೂ ಕಲೆ ಮತ್ತು ಕಲಾವಿದರನ್ನು ತಾಯಿಯಂತೆ ಪೋಷಿಸುತ್ತಿದೆ. ನಾಗೇಗೌಡರ ಕಾಲದಲ್ಲಿ ಕಲಾವಿದರಿಗಾಗಿ ಆರೋಗ್ಯ ನಿಧಿ ಸ್ಥಾಪಿಸಿದ್ದೆವು. ಆದರೆ, ಕಲಾವಿದರಲ್ಲೇ ಹುಟ್ಟಿಕೊಂಡ ದಲ್ಲಾಳಿಗಳಿಂದಾಗಿ ಆ ಯೋಜನೆ ನಿಂತಿತು. ಕಲಾವಿದರು ಸಹಕಾರಿ ಸಂಸ್ಥೆ ಸ್ಥಾಪಿಸಿಕೊಂಡು ತಮ್ಮ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ನಾಡಿಗೆ ಭೇಟಿ ನೀಡಿದ್ದ ಪಾಶ್ಚಾತ್ಯ ವಿದ್ವಾಂಸರು ಇಲ್ಲಿನ ಜಾನಪದ ಕಲೆ, ಪರಂಪರೆ ಹಾಗೂ ಭಾಷೆ ಸಂರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರಕ ಕಿಟೆಲ್ ಬರೆದ ಕನ್ನಡ ನಿಘಂಟಿಗೆ ಸರಿಸಾಟಿಯಾದ್ದದ್ದು ಮತ್ತೊಂದಿಲ್ಲ. ಜಗತ್ತಿನಲ್ಲಿ ವಿಶ್ವ ಜಾನಪದ ಪರಿಕಲ್ಪನೆಯೇ ಇಲ್ಲ. ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಬಿಟ್ಟರೆ ಉತ್ತರ ಭಾರತದಲ್ಲೂ ಇಲ್ಲ’ ಎಂದರು.
ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ‘ಸಮೃದ್ಧ ಜಾನಪದ ಕಲೆಗಳು ಮತ್ತು ಕಲಾವಿದರ ಸ್ಥಿತಿ ಸುಧಾರಣೆಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಪರಿಷತ್ತು ಮಾಡುವ ಕೆಲಸಕ್ಕೆ ಸರ್ಕಾರ ವರ್ಷಕ್ಕೆ ಕೇವಲ ₹1 ಕೋಟಿ ಮಾತ್ರ ನೀಡುತ್ತದೆ. ಅದನ್ನು ಪಡೆಯಲು ಪ್ರಯಾಸಪಡಬೇಕು. ಪರಿಷತ್ತಿನ ಕೆಲಸಕ್ಕೆ ಕನಿಷ್ಠ ₹5 ಕೋಟಿ ಅನುದಾನ ಬೇಕು. ಅದಕ್ಕಾಗಿ ಕಲಾವಿದರ ನಿಯೋಗದೊಂದಿಗೆ ಶೀಘ್ರ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ‘ಜಾನಪದವನ್ನು ಯುವ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ದಿನಾಚರಣೆ ಪರಿಣಾಮಕಾರಿಯಾದುದು. ಅಕ್ಷರ ಜ್ಞಾನ ಇಲ್ಲದಿದ್ದರೂ ನಮ್ಮ ಜನಪದರು ಸಮೃದ್ಧ ಸಾಹಿತ್ಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಪರಿಷತ್ತು ಮಾಡಿಕೊಂಡು ಬರುತ್ತಿದೆ’ ಎಂದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ, ಲೋಕದ ಕ್ಯುರೇಟರ್ ಡಾ. ಯು.ಎಂ. ರವಿ, ನಾಡೋಜ ಎಚ್. ಎಲ್. ನಾಗೇಗೌಡ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಸಂದೀಪ್ ಕೆ.ಎಸ್ ಇದ್ದರು. ಕಾರ್ಯನಿರ್ವಾಹಕ ಅಧಿಕಾರಿ ಸರಸವಾಣಿ ಗಣ್ಯರನ್ನು ಸ್ವಾಗತಿಸಿದರು. ರಂಗ ಸಹಾಯಕ ಪ್ರದೀಪ್ ನಿರೂಪಣೆ ಮಾಡಿದರು. ಚನ್ನಪಟ್ಟಣದ ಕಲಾವಿದ ತೇಜಸ್ ಗೌಡ ಯಕ್ಷಗಾನ ಪ್ರದರ್ಶನ ನೀಡಿದರು.
ರಾಜ ಪ್ರಭುತ್ವ ಬ್ರಿಟಿಷ್ ಪ್ರಭುತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿದ ಎಚ್.ಎಲ್. ನಾಗೇಗೌಡರು ಜಾನಪದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅವರು ಕಟ್ಟಿದ ಈ ಪರಿಷತ್ತು ಮಾಡಿರುವ ಕೆಲಸವನ್ನು ಬೇರಾವ ಸಂಸ್ಥೆಯು ಮಾಡಿಲ್ಲ– ಡಾ. ಚಕ್ಕೆರೆ ಶಿವಶಂಕರ್ ಜಾನಪದ ವಿದ್ವಾಂಸ
ನಮ್ಮ ನಾಡಿನಲ್ಲಿ 21 ಜಾನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ದೇಶದ ಬೇರಾವ ಭಾಷೆಯಲ್ಲೂ ಇಷ್ಟೊಂದು ಮಹಾಕಾವ್ಯಗಳಿಲ್ಲ. ರಾಜ್ಯದಲ್ಲಿ 160ಕ್ಕೂ ಹೆಚ್ಚು ಜಾನಪದ ಕಲೆಗಳಿವೆ. ಬೇರಾವ ದೇಶ ಹಾಗೂ ರಾಜ್ಯಗಳಲ್ಲೂ ಇಷ್ಟು ಕಲೆಗಳಿಲ್ಲ– ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು
‘ಜಾನಪದ ಕಲೆಗಳನ್ನು ನೆಚ್ಚಿಕೊಂಡರೆ ಅನ್ನ ಸಿಗದು. ಕುಟುಂಬ ನಡೆಯದು. ನಾವಂತು ಚಿಕ್ಕಂದಿನಲ್ಲೇ ಈ ಕಲೆಗೆ ಅಂಟಿಕೊಂಡೆವು. ಆದರೆ ನಮ್ಮ ಮಕ್ಕಳಿಗೆ ಮಾತ್ರ ಯಾವುದೇ ಕಾರಣಕ್ಕೂ ತರುವುದಿಲ್ಲ. ನಮ್ಮೊಂದಿಗೆ ಮುಗಿದು ಬಿಡಲಿ. ಕಲೆಗಿಂತ ಬದುಕು ದೊಡ್ಡದು’ ಎಂದು ಡೊಳ್ಳು ಕುಣಿತ ಕಲಾವಿದರ ಮಹೇಶ್ ನೋವಿನಿಂದ ನುಡಿದರು. ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು ‘ಮೂಲ ಕಲಾವಿದರಿಗೆ ಬೆಲೆ ಇಲ್ಲ. ಯಾವ ಕಲೆಗೆ ಯಾವ ವಾದ್ಯ ಬೇಕೆಂಬ ಪರಿವು ಇತ್ತೀಚೆಗೆ ಇಲ್ಲವಾಗಿದೆ. ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜೀ ಹುಜೂರ್ ಎನ್ನುವ ಕಲಾವಿದರಷ್ಟೇ ಬೇಕು. ಕಾರ್ಯಕ್ರಮ ಕೊಟ್ಟರೂ ಬಿಲ್ ಸಿಗಲು ತಿಂಗಳುಗಟ್ಟಲೆ ಕಾಯಬೇಕು. ಅದಕ್ಕೂ ಹಲವು ಅಡೆತಡೆಗಳು. ಹೀಗಿರುವಾಗ ಕಲೆಯಿಂದ ಬದುಕಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
‘ಆಧುನಿಕತೆಯ ಭರಾಟೆಯಲ್ಲಿ ಕಲೆಗಳು ತಮ್ಮ ಮೂಲಸ್ವರೂಪ ಕಳೆದುಕೊಂಡಿವೆ. ಯಾವ ಕಲೆಯೂ ಈಗ ಮೂಲಧಾಟಿಯಲ್ಲಿ ಪ್ರದರ್ಶನವಾಗುತ್ತಿಲ್ಲ. ವಾದ್ಯಗಳು ಸಹ ಪ್ಲಾಸ್ಟಿಕ್‌ಮಯವಾಗಿವೆ. ದೇವರ ಕಾರ್ಯದಿಂದಿಡಿದು ಎಲ್ಲಾ ಶುಭ–ಸಮಾರಂಭಗಳಿಗೆ ಚರ್ಮವಾದ್ಯ ಬಿಟ್ಟರೆ ಬೇರಾವೂ ಸಲ್ಲುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದಾಗಿ ಕಲೆಗಳು ಜನಪ್ರಿಯವಾದರೂ ಅವುಗಳ ಮೂಲಸ್ವರೂಪ ವಿರೂಪವಾಗುತ್ತಿದೆ’ ಎಂದು ತಮಟೆ ಕಲಾವಿದ ಗೋವಿಂದಯ್ಯ ಆತಂಕ ವ್ಯಕ್ತಪಡಿಸಿದರು. ‘ಕಲೆಗಾಗಿಯೇ ಬದುಕುವ ಕಲಾವಿದರ ಬದುಕಿಗೆ ಆಸರೆ ಬೇಕಿದೆ. ಸರ್ಕಾರ ಕಲಾವಿದರಿಗೆ ಉಚಿತವಾಗಿ ಓಡಾಡಲು ಬಸ್ ಬಸ್ ನೀಡಬೇಕು. ಉಚಿತವಾಗಿ ಆರೋಗ್ಯ ಚಿಕಿತ್ಸೆ ಹಾಗೂ ವಿಮೇ ನೀಡಬೇಕು’ ಎಂದು ಪೂಜಾ ಕುಣಿತ ಕಲಾವಿದರ ಶಿವಣ್ಣ ಒತ್ತಾಯಿಸಿದರು. ವಿವಿಧ ಕಲಾವಿದರು ತಮ್ಮ ಬದುಕು ಹಾಗೂ ಕಲೆಗಳ ಸ್ಥಿತಿಗತಿಯನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.