
ರಾಮನಗರ: ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಷೋನಲ್ಲಿ ನಿರೂಪಕ ಕಿಚ್ಚ ಸುದೀಪ್ ತಪ್ಪು ಮಾಹಿತಿ ನೀಡಿದ್ದ ಸಂಬಂಧ ಸ್ಪಷ್ಟೀಕರಣ ನೀಡುವಂತೆ ‘ಕಲರ್ಸ್’ ವಾಹಿನಿ ಷೋ ಆಯೋಜಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಷೋನ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಟಾಸ್ಕ್‌ನಲ್ಲಿ ಸ್ಪರ್ಧಿಯೊಬ್ಬರು ರಣಹದ್ದು ಚಿತ್ರ ತೋರಿಸಿದಾಗ ಸುದೀಪ್, ‘ಹೊಂಚು ಹಾಕಿ ಸಂಚು ಮಾಡಿ ಕರೆಕ್ಟ್ ಟೈಮಿಗೆ ಲಬಕ್ ಅಂತ ಹಿಡಿಯುವುದು’ ಎಂದಿದ್ದರು. ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಇದಕ್ಕೆ ಆಕ್ಷೇಪಿಸಿತ್ತು.
‘ರಣಹದ್ದು ಸ್ವಭಾವ ಕುರಿತು ಸುದೀಪ್ ತಪ್ಪು ಮಾಹಿತಿ ನೀಡಿದ್ದಾರೆ. ರಣಹದ್ದುಗಳು ಸತ್ತ ಜೀವಿಗಳ ಕಳೇಬರ ತಿಂದು ಪರಿಸರ ಸ್ವಚ್ಛಗೊಳಿಸಿ, ಸಾಂಕ್ರಾಮಿಕ ರೋಗ ಹರಡದಂತೆ ಪ್ರಮುಖ ಪಾತ್ರ ವಹಿಸುತ್ತವೆ. ತಪ್ಪು ಮಾಹಿತಿಯಿಂದ ರಣಹದ್ದುಗಳ ಸಂರಕ್ಷಣೆಗೆ ಹಿನ್ನಡೆ ಆಗಲಿದೆ.
‘ಈ ಬಗ್ಗೆ ಸುದೀಪ್ ಸ್ಪಷ್ಟೀಕರಣ ನೀಡಿ ತಪ್ಪುಗ್ರಹಿಕೆ ದೂರ ಮಾಡಲು ಷೋ ಆಯೋಜಕರಿಗೆ ಸೂಚನೆ ನೀಡಬೇಕು ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಜ.12ಕ್ಕೆ ಮನವಿ ಕೊಟ್ಟಿದ್ದರು.
ಇದರ ಬೆನ್ನಲ್ಲೇ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಮಕೃಷ್ಣಪ್ಪ, ಷೋ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ. ‘ಪರಿಸರ ಸಮತೋಲನ ಕಾಪಾಡುವ ರಣಹದ್ದುಗಳ ಬಗ್ಗೆ ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಒದಗಿಸುವುದು ನಮ್ಮ ಕರ್ತವ್ಯ. ರಣಹದ್ದು ಸ್ವಭಾವ ಕುರಿತು ಮುಂದಿನ ಸಂಚಿಕೆಯಲ್ಲಿ ಸ್ಪಷ್ಟೀಕರಣ ನೀಡಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.