ತಂದೆ ಮುತ್ತಪ್ಪ ರೈ ಜೊತೆಗೆ ರಿಕ್ಕಿ ರೈ
ರಾಮನಗರ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರಿನ ಮೇಲೆ ತಾಲ್ಲೂಕಿನ ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.
ಘಟನೆಯಲ್ಲಿ ರಿಕ್ಕಿ ಕೈ ಮತ್ತು ಮೂಗಿಗೆ ಗುಂಡೇಟು ತಗುಲಿದೆ. ಪ್ರಾಣಾಪಾಯದಿಂದ ಪಾರಾಗಿರುವ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಿಕ್ಕಿ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈ ಅವರಿಗೆ ಒಂದು ಕಾಲದಲ್ಲಿ ಆಪ್ತನಾಗಿದ್ದ ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಬಂಟ್ವಾಳದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುತ್ತಪ್ಪ ರೈ ಆಸ್ತಿ ನೋಡಿಕೊಳ್ಳುವ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ರಿಕ್ಕಿ ನಡೆಸುತ್ತಿದ್ದರು. ತಂದೆ ಸಾವಿನ ಬಳಿಕ ಮಲತಾಯಿ ಅನುರಾಧ ಜೊತೆ ಹಾಗೂ ತಂದೆಯ ವ್ಯವಹಾರ ಪಾಲುದಾರರಾಗಿದ್ದವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಏರ್ಪಟ್ಟಿತ್ತು.
ಕೆಲ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದವು. ಇದೇ ಕಾರಣಕ್ಕೆ ಸುಪಾರಿ ಕೊಟ್ಟು ರಿಕ್ಕಿ ಹತ್ಯೆಗೆ ಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಪ್ರಕರಣದ ತನಿಖೆಗೆ ಡಿವೈಎಸ್ಪಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದಾರೆ.
ಕಾದು ಕುಳಿತು ಕೃತ್ಯ: ರಿಕ್ಕಿ ಅವರು ಬೆಂಗಳೂರಿನ ಸದಾಶಿವನಗರ ಮತ್ತು ಬಿಡದಿ ಬಳಿ ಮನೆ ಹೊಂದಿದ್ದು ಆಗಾಗ ಬಂದು ಹೋಗುತ್ತಿದ್ದರು. ಈ ಮಾಹಿತಿ ಸಂಗ್ರಹಿಸಿರುವ ಸುಪಾರಿ ಹಂತಕರು ರಿಕ್ಕಿ ಅವರ ಚಲನವಲನ ಗಮನಿಸಿ, ಕಾದು ಕುಳಿತು ಚಲಿಸುತ್ತಿದ್ದ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದಾಶಿವನಗರದ ಮನೆಯಿಂದ ಸಂಜೆ 6ರ ಸುಮಾರಿಗೆ ಹೊರಟಿದ್ದ ರಿಕ್ಕಿಸಂಜೆ 7ರ ಸುಮಾರಿಗೆ ಬಿಡದಿ ಮನೆಗೆ ಬಂದಿದ್ದರು. ಕೆಲ ಹೊತ್ತು ವಿಶ್ರಾಂತಿ ಪಡೆದು ರಾತ್ರಿ 11ರ ಸುಮಾರಿಗೆ ಕಪ್ಪು ಬಣ್ಣದ ಫಾರ್ಚ್ಯೂನರ್ ಕಾರಿನಲ್ಲಿ ಚಾಲಕ ಬಸವರಾಜು ಹಾಗೂ ಅಂಗರಕ್ಷಕ ರಾಜ್‌ಪಾಲ್ ಜೊತೆ ಹೊರಟಿದ್ದರು. ಮನೆ ಪ್ರವೇಶ್ವಾರದಿಂದ ಅನತಿ ದೂರಕ್ಕೆ ಕಾರು ಬಂದಾಗ ಟಪ್ ಎಂಬ ಶಬ್ದ ಕೇಳಿತು.
ಕಾರು ನಿಲ್ಲಿಸಿದ್ದರು: ಶಬ್ದ ಕೇಳಿ ಟೈಯರ್‌ನಲ್ಲಿ ಸಮಸ್ಯೆ ಇರಬೇಕೆಂದು ಚಾಲಕ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಅಲ್ಲಿಂದ ಹೊರಟು ರೈಲ್ವೆ ಕ್ರಾಸ್‌ವರೆಗೆ ಬಂದಾಗ, ರಿಕ್ಕಿ ತನ್ನ ಪರ್ಸ್ ಮರೆತಿರುವುದಾಗಿ ಹೇಳಿದ್ದರಿಂದ ಮತ್ತೆ ಮನೆಗೆ ವಾಪಸ್ಸಾಗಿದ್ದರು. ಮನೆಗೆ ಬಂದವರು ಮತ್ತೆ ವಿಶ್ರಾಂತಿ ಪಡೆದು ಮಧ್ಯರಾತ್ರಿ 12.50ಕ್ಕೆ ಬೆಂಗಳೂರಿಗೆ ಹೊರಟಿದ್ದರು.
ಕಾರು ಪ್ರವೇಶದ್ವಾರ ದಾಟಿ ಕಾರು ಸ್ವಲ್ಪ ಮುಂದಕ್ಕೆ ಬರುತ್ತಿದ್ದಂತೆ ಮುಂಭಾಗದ ರಸ್ತೆ ಪಕ್ಕದ ಕಾಂಪೌಂಡ್ ಕಡೆಯಿಂದ ಏಕಾಏಕಿ ಗುಂಡಿನ ದಾಳಿ ನಡೆಯಿತು. ಬಸವರಾಜು ಅವರಿಗೆ ತಪ್ಪಿದ ಗುಂಡು ಕಾರಿನ ಸೀಟು ಸೀಳಿಕೊಂಡು ಹಿಂದೆ ಕುಳಿತಿದ್ದ ರಿಕ್ಕಿ ಅವರ ಮೂಗು ಮತ್ತು ಬಲತೋಳಿಗೆ ತಗುಲಿದೆ.
ಗಾಯಗೊಂಡ ರಿಕ್ಕಿ ಅವರನ್ನು ಚಾಲಕ ಮತ್ತು ಅಂಗರಕ್ಷಕ ಅದೇ ಕಾರಿನಲ್ಲಿ ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಗುಂಡು, ಮೊಬೈಲ್ ಪತ್ತೆ: ಕೃತ್ಯ ನಡೆದ ಸ್ಥಳದಲ್ಲಿ ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಹಂತಕರು ಗುಂಡು ಹಾರಿಸಿರುವ ಕಾಂಪೌಂಡ್ ಬಳಿ ಡಬಲ್ ಬ್ಯಾರಲ್ ಬಂದೂಕಿನ ಗುಂಡು, ಪಿಸ್ತೂಲ್ ಗುಂಡುಗಳು ಹಾಗೂ ಸಿಮ್ ಕಾರ್ಡ್ ಇಲ್ಲದ ಬೇಸಿಕ್ ಮೊಬೈಲ್ ಹ್ಯಾಂಡ್‌ಸೆಟ್ ಸಿಕ್ಕಿದೆ. ಹಾಗಾಗಿ, ಸುಪಾರಿ ಹಂತಕರು ಎರಡು ಬಂದೂಕುಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರಿನೊಳಗೆ ಇದ್ದ ಗುಂಡನ್ನು ಸಹ ಪೊಲೀಸರು ಪತ್ತೆ ಹಚ್ಚಿ ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಐಜಿಪಿ ಲಾಭೂ ರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಡಿವೈಎಸ್‌ಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಿಕ್ಕಿ ರೈ ಮೇಲೆ ರಾತ್ರಿ ನಡೆದಿರುವ ಗುಂಡಿನ ದಾಳಿ ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತಂಡ ರಚಿಸಲಾಗಿದೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದುಲಾಭೂ ರಾಮ್ ಐಜಿಪಿ ಕೇಂದ್ರ ವಲಯ
ರಷ್ಯಾದಲ್ಲಿ ವಾಸ ಮೂವತ್ತೈದು ವರ್ಷದ ರಿಕ್ಕಿ ಅವರಿಗೆ ಮೊದಲ ಪತ್ನಿಯೊಂದಿಗೆ ವಿಚ್ಛೇದನವಾಗಿದೆ. ಎರಡನೇ ಪತ್ನಿ ರಷ್ಯಾದವರಾಗಿದ್ದು ಪುತ್ರ ಕೂಡ ಇದ್ದಾನೆ. ಕುಟುಂಬದದೊಂದಿಗೆ ರಷ್ಯಾದಲ್ಲೂ ಹೆಚ್ಚಾಗಿ ಇರುತ್ತಿದ್ದ ರಿಕ್ಕಿ ಅವರು ಕುಟುಂಬದ ಆಸ್ತಿ ಕಂಪನಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ಳುವ ಸಲುವಾಗಿ ಆಗಾಗ ಬೆಂಗಳೂರಿಗೆ ಬರುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಜೀವ ಬೆದರಿಕೆ ಇದೆ ಎಂದಿದ್ದ ರಿಕ್ಕಿ ತಮಗೆ ಜೀವ ಬೆದರಿಕೆ ಇದೆ ಎಂದು ರಿಕ್ಕಿ ಯಾವಾಗಲೂ ಹೇಳುತ್ತಿದ್ದರು. ಗುಂಡಿನ ದಾಳಿ ಬಳಿಕ ನನ್ನೊಂದಿಗೆ ಮಾತನಾಡಿದ ಅವರು ಘಟನೆ ಹಿಂದೆ ರಾಕೇಶ್ ಮಲ್ಲಿ ಅನುರಾಧ ನಿತೇಶ್ ಶೆಟ್ಟಿ ವೈದ್ಯನಾಥನ್ ಹಾಗೂ ಸಹಚರರು ಇರುವ ಕುರಿತು ಅನುಮಾನ ವ್ಯಕ್ತಪಡಿಸಿದರು. ತಮ್ಮ ತಂದೆ ಸಾಯುವ ಮುನ್ನ ರಾಕೇಶ್ ಮತ್ತು ಅನುರಾಧ ಜೀವ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದರು. ಇದೇ ಕಾರಣಕ್ಕೆ ಸದಾ ಎಚ್ಚರಿಕೆಯಿಂದ ಇರುವಂತೆ ತಂದೆ ತಮಗೆ ಸದಾ ಹೇಳಿದ್ದರು ಎಂದು ರಿಕ್ಕಿ ಹೇಳಿದರು. ಹಾಗಾಗಿ ಘಟನೆ ಹಿಂದೆ ಅವರೇ ಇದ್ದಾರೆ ಎಂದು ಬಸವರಾಜು ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆಗೆ ಮೂರು ತಂಡ ರಚನೆ ಪ್ರಕರಣದ ತನಿಖೆಗಾಗಿ ಮೂವರು ಡಿವೈಎಸ್ಪಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕಾರು ಚಾಲಕ ಬಸವರಾಜು ಅಂಗರಕ್ಷಕ ರಿಕ್ಕಿ ಆಪ್ತರು ಹಾಗೂ ವಾಸವಾಗಿರುವ ಲೇಔಟ್‌ನ ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಸ್ಥಳದ ಸುತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿರುವ ವ್ಯಕ್ತಿಗಳನ್ನು ಕರೆದು ವಿಚಾರಣೆ ನಡೆಸಲಾಗುವುದು. ರಿಕ್ಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಸುದ್ದಿಗಾರರಿಗೆ ತಿಳಿಸಿದರು. ‘ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಹತ್ಯೆ ಯತ್ನಕ್ಕೆ ವಿವಿಧ ಆರೋಪಗಳು ಕೇಳಿ ಬರುತ್ತಿವೆ. ಪ್ರಕರಣವೊಂದರ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗಲು ರಿಕ್ಕಿ ಬಂದಿದ್ದರು ಎಂದು ಅವರ ಕಡೆಯವರು ಹೇಳಿದ್ದಾರೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.
ಬಲ್ಲವರಿಂದಲೇ ರಿಕ್ಕಿ ಚಲನವಲನ ಮಾಹಿತಿ ಗುಂಡಿನ ದಾಳಿ ನಡೆಸಿರುವವರು ಸುಪಾರಿ ಪಡೆದಿರುವ ಶಾರ್ಪ್ ಶೂಟರ್‌ಗಳಾಗಿರುವ ಸಾಧ್ಯತೆ ಇದ್ದು ರಿಕ್ಕಿ ಅವರ ಚಲನವಲನದ ಕುರಿತು ಅವರ ಆತ್ಮೀಯರೇ ಶೂಟರ್‌ಗಳಿಗೆ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲದಿದ್ದರೆ ಒಮ್ಮೆ ಮನೆಯಿಂದ ಹೊರಟ ರಿಕ್ಕಿ ಮತ್ತೆ ಬರುವ ಮಾಹಿತಿ ಶೂಟರ್‌ಗಳಿಗೆ ಹೇಗೆ ತಿಳಿಯುತ್ತಿತ್ತು ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆಯುವುದಕ್ಕೆ ಮುಂಚೆ ಮತ್ತು ನಂತರದ ಅವಧಿಯ ಮೊಬೈಲ್ ಕರೆಗಳ ವಿವರಗಳನ್ನು ಸಹ ಸಂಗ್ರಹಿಸುತ್ತಿದ್ದಾರೆ. ದಾರಿಯುದ್ದಕ್ಕೂ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ರಿಕ್ಕಿ ಜೊತೆ ನಿಕಟ ಸಂಪರ್ಕ ಹೊಂದಿರುವವರನ್ನು ಮನೆಯಲ್ಲಿ ಕೆಲಸ ಮಾಡುವವರನ್ನು ಸಹ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮಲತಾಯಿ ನಿತೇಶ್ ಜೊತೆ ವ್ಯಾಜ್ಯ ಮುತ್ತಪ್ಪ ರೈ ನಿಧನದ ಬಳಿಕ ಅವರ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಎರಡನೇ ಪತ್ನಿ ಅನುರಾಧ ಮುತ್ತಪ್ಪ ಅವರ ಇಬ್ಬರು ಪುತ್ರರಾದ ರಾಕಿ ರೈ ಮತ್ತು ರಿಕ್ಕಿ ರೈ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಸಂಧಾನ ನಡೆದು ಆಸ್ತಿ ಹಂಚಿಕೊಂಡಿದ್ದರು. ಆದರೂ ಮಲತಾಯಿ ಮತ್ತು ಪುತ್ರರ ನಡುವೆ ವೈಷಮ್ಯ ಇದ್ದೇ ಇತ್ತು. ಮುತ್ತಪ್ಪ ರೈ ಬದುಕಿದ್ದಾಗ ದೇವನಹಳ್ಳಿಯಲ್ಲಿ ಖರೀದಿಸಿದ್ದ ಜಮೀನಿನನ್ನು ಅಭಿವೃದ್ಧಿಪಡಿಸಲು ನಿತೇಶ್ ಎಸ್ಟೇಟ್ ಮಾಲೀಕ ನಿತೇಶ್ ಶೆಟ್ಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ರೈ ಅವರು ತಮ್ಮ ಪಾಲಿನ ನಿವೇಶನಗಳನ್ನು ಮಾರಾಟ ಮಾಡಲು ಮುಂದಾದಾಗ ನಿತೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಇನ್ನೂ ನಡೆಯುತ್ತಿದೆ. ಅಲ್ಲದೆ ಮುತ್ತಪ್ಪ ರೈ ಅವರಿಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ ನಂತರ ರೈ ವಿರುದ್ಧ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚನೆ ಮತ್ತು ಜೀವ ಬೆದರಿಕೆಯ ಆರೋಪ ಮಾಡಿದ್ದರು. ರೈ ನಿಧನದ ಬಳಿಕ ಇದೇ ವಿಷಯ ರಿಕ್ಕಿ ಮತ್ತು ಮಲ್ಲಿ ನಡುವಣ ತಿಕ್ಕಾಟಕ್ಕೆ ಕಾರಣವಾಗಿತ್ತು. ಹಾಗಾಗಿ ರಿಕ್ಕಿ ಮೇಲಿನ ಗುಂಡಿನ ದಾಳಿಯ ಹಿಂದೆ ಈ ಮೂವರ ಕೈವಾಡವಿರುವ ಕುರಿತು ರಿಕ್ಕಿ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.