ADVERTISEMENT

ಸಾಧನೆಗೆ ನಿರುತ್ಸಾಹ ಅಡ್ಡಿ: ವಿದ್ಯಾರ್ಥಿಗಳಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:39 IST
Last Updated 16 ಫೆಬ್ರುವರಿ 2021, 3:39 IST
ಚನ್ನಪಟ್ಟಣದಲ್ಲಿ ನಡೆದ ಉಚಿತ ತರಬೇತಿ ತರಗತಿಯನ್ನು ಉಪನ್ಯಾಸಕ ಶಿವರಾಮ ಬಂಡಾರಿ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ನಡೆದ ಉಚಿತ ತರಬೇತಿ ತರಗತಿಯನ್ನು ಉಪನ್ಯಾಸಕ ಶಿವರಾಮ ಬಂಡಾರಿ ಉದ್ಘಾಟಿಸಿದರು   

ಚನ್ನಪಟ್ಟಣ: ಜೀವನದಲ್ಲಿ ನಿರುತ್ಸಾಹ ಇಟ್ಟುಕೊಂಡರೆ ಸಾಧನೆ ಸಾಧ್ಯವಾಗುವುದಿಲ್ಲ ಎಂದು ಉಪನ್ಯಾಸಕ ಶಿವರಾಮ ಬಂಡಾರಿ
ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವ ಕರ್ನಾಟಕ ವಿದ್ಯಾರ್ಥಿ ಕ್ರಿಯಾಸಮಿತಿ, ಮಾರ್ಗದರ್ಶಿ ಶಿಕ್ಷಣ ಸೇವಾ ಸಂಸ್ಥೆಯಿಂದ ಭಾನುವಾರ ನಡೆದ ಎಸ್‌ಡಿಎ ಹಾಗೂ ಎಫ್‌ಡಿಎ ಪರೀಕ್ಷಾರ್ಥಿಗಳಿಗೆ ಉಚಿತ ತರಬೇತಿ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಂಡಾಗ ಅದರಲ್ಲಿ ಉತ್ತೀರ್ಣರಾಗಿ ಕೆಲಸ ಪಡೆಯಲೇಬೇಕು ಎಂಬ ಬದ್ಧತೆಯಿಂದ ಪ್ರಯತ್ನಿಸಬೇಕು. ಆಗ ಮಾತ್ರ ಸಾಧನೆ ಸಾಧ್ಯ ಎಂದರು.

ADVERTISEMENT

ಸಾಧಿಸುವ ಛಲ ಇದ್ದರೆ ಯಾವುದೂ ಕಷ್ಟವಾಗುವುದಿಲ್ಲ. ವಿದ್ಯಾರ್ಥಿಗಳು ಮಾತೃಭಾಷೆಯಾಗಿ ಕನ್ನಡ ಕಲಿಯಬೇಕು. ಇಂದಿನ ದಿನಗಳಲ್ಲಿ ಪ್ರತಿ ವಿಷಯದಲ್ಲಿಯೂ ಇಂಗ್ಲಿಷ್ ಹಾಸುಹೊಕ್ಕಾಗಿದೆ. ಅನ್ನದ ಭಾಷೆಯಾಗಿ ಇಂಗ್ಲಿಷ್ ಕಲಿತರೆ ಒಳಿತು ಎಂದು
ಅಭಿಪ್ರಾಯಪಟ್ಟರು.

ಉಪನ್ಯಾಸಕ ದೊಡ್ಡಬೋರಯ್ಯ ಮಾತನಾಡಿ, ಉಪನ್ಯಾಸಕರು ಏನೋ ಹೇಳುವುದು, ವಿದ್ಯಾರ್ಥಿಗಳು ಏನೋ ಕೇಳುವುದು ಎಂದೂ ಆಗಬಾರದು. ಉಪನ್ಯಾಸಕರು ಹೇಳುವುದು ತಿಳಿಯದಿದ್ದಾಗ ಅದರ ಬಗ್ಗೆ ಪ್ರಶ್ನೆ ಮಾಡಿ ತಿಳಿಯುವ ಮೂಲಕ ಯಶಸ್ಸು ಕಾಣಬೇಕು ಎಂದು ತಿಳಿಸಿದರು.

ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಪರೀಕ್ಷೆ ಎದುರಿಸುವ ಮಟ್ಟಕ್ಕೆ ಬೆಳೆಯಬೇಕು. ಕೀಳರಿಮೆ ದೂರವಾಗಬೇಕು. ಆಗಮಾತ್ರ ಸಾಧಿಸುವ ಛಲ ಹುಟ್ಟುತ್ತದೆ ಎಂದು ಹೇಳಿದರು.

ಸಮಿತಿಯ ಸಂಚಾಲಕ ಚಿಕ್ಕಮಲವೇಗೌಡ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿದ್ದರಾಜು, ವಿದ್ಯಾರ್ಥಿಗಳಾದ ಶರತ್, ಶಿವಕುಮಾರ್, ಎಸ್. ರಕ್ಷಿತ್ ಕುಮಾರ್, ಸುಮಂತ್ ಹಾಗೂ ಅನಿಲ್ ಹಾಜರಿದ್ದರು. ವಿದ್ಯಾರ್ಥಿನಿ ಪೃಥ್ವಿ ಹಾಗೂ ಮೆಹರ್ ಸಲ್ಮಾ ಪ್ರಾರ್ಥಿಸಿದರು. ಕೆ.ಎಸ್. ಮಹೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.