ADVERTISEMENT

ರಾಮನಗರ: ‘ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ’: ಸಂಸದ ಡಿ.ಕೆ.ಸುರೇಶ್‌

ರಾಜ್ಯ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:44 IST
Last Updated 13 ಜುಲೈ 2020, 16:44 IST
ಸಂಸದ ಡಿ.ಕೆ. ಸುರೇಶ್‌ ಸೋಮವಾರ ಪಿಪಿಇ ಕಿಟ್‌ ತೊಟ್ಟು ರಾಮನಗರದ ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳ ಸಮಸ್ಯೆ ಆಲಿಸಿದರು
ಸಂಸದ ಡಿ.ಕೆ. ಸುರೇಶ್‌ ಸೋಮವಾರ ಪಿಪಿಇ ಕಿಟ್‌ ತೊಟ್ಟು ರಾಮನಗರದ ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳ ಸಮಸ್ಯೆ ಆಲಿಸಿದರು   

ರಾಮನಗರ: ’ರಾಜ್ಯ ಸರ್ಕಾರಕ್ಕೆ ಸ್ವಲ್ಪವಾದರೂ ಮಾನ-ಮರ್ಯಾದೆ ಇದ್ದರೆ ಆಶಾ ಕಾರ್ಯಕತೆಯರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು’ ಎಂದು ಸಂಸದ ಡಿ.ಕೆ. ಸುರೇಶ್‌ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಪತ್ರಕರ್ತರ ಜತೆ ಅವರು ಮಾತನಾಡಿದರು. ಪ್ರತಿಯೊಬ್ಬ ನೌಕರರಿಗೂ ಕನಿಷ್ಠ ವೇತನ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನಿಯಮ ರೂಪಿಸಿವೆ. ಆದರೆ, ಇಂದಿಗೂ ಆಶಾ ಕಾರ್ಯಕರ್ತೆಯರನ್ನು ಕೇವಲ ₹4 ಸಾವಿರಕ್ಕೆ ದುಡಿಸಿಕೊಳ್ಳುತ್ತಿರುವುದು ವಿಷಾದನೀಯ. ಇರುವ ವೇತನದೊಂದಿಗೆ ಇನ್ನು ₹6-8ಸಾವಿರ ವೇತನ ಹೆಚ್ಚಳಕ್ಕೆ ಅವರು ಆಗ್ರಹಿಸಿದ್ದಾರೆ. ಹಗಲು-ಇರುಳೆನ್ನದೇ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿರುವ ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪೂರ್ಣ ಆಸ್ಪತ್ರೆ ಮೀಸಲಿಡಿ: ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಜಿಲ್ಲೆಗಾಗಿ 600 ಹಾಸಿಗೆ ನೀಡಲು ಮುಂದಾಗಿದ್ದಾರೆ. ಇಡೀ ಆಸ್ಪತ್ರೆಯನ್ನೇ ಜಿಲ್ಲೆಗೆ ನೀಡಲು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಸುರೇಶ್‌ ಹೇಳಿದರು.

ದಯಾನಂದ ಸಾಗರ್ ಆಸ್ಪತ್ರೆಯು 60 ಹಾಸಿಗೆಗಳನ್ನು ನೀಡಿದೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿಯು ಹಾಸಿಗೆ ಇದೆ . ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳ ಹಾಸ್ಟೆಲ್‌ ಹಾಗು ಕ್ವಾರೆಂಟೈನ್ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ನಡೆಯುತ್ತಿದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸರ್ಕಾರದ ಅನುಮತಿ ಕೇಳಲಾಗಿದೆ ಎಂದರು.

ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಸರ್ಕಾರ ಈಗ ಪೌಷ್ಟಿಕ ಆಹಾರ ವಿತರಿಸಲು ಸರ್ಕಾರ ಮುಂದಾಗಿದೆ. ನಾವು ಈಗಾಗಲೇ ಡಿಕೆಎಸ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಈ ಕಾರ್ಯ ಮಾಡಿದ್ದೇವೆ ಎಂದರು.

ಭಯ ಬೇಡ: ಕೊರೊನಾ ಬಗ್ಗೆ ಜನರು ಅನಗತ್ಯವಾಗಿ ಆತಂಕ ಪಡುವ ಅಗತ್ಯ ಇಲ್ಲ. ಜಿಲ್ಲೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ತಡ ಮಾಡಿದರೆ ಇಡೀ ಕುಟುಂಬಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.