ಮಾಗಡಿ: ಪಟ್ಟಣದ ಎನ್ಇಎಸ್ ವೃತ್ತದ ಬಳಿ ಮಾಜಿ ಶಾಸಕ ಮಂಜುನಾಥ್ ಸ್ವಂತ ಅನುನದಲ್ಲಿ ನಿರ್ಮಾಣ ಮಾಡಿದ್ದ ಗಾಂಧಿ ಪುತ್ಥಳಿಯನ್ನು ವೃತ್ತವನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ತೀವ್ರ ವಿರೋಧ ನಡುವೆ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
2018ರಲ್ಲಿ ಸ್ವಂತ ವೆಚ್ಚದಲ್ಲಿ ಮಂಜುನಾಥ್ ಪುತ್ಥಳಿ ನಿರ್ಮಾಣ ಮಾಡಿದ್ದರು. ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಎನ್ಇಎಸ್ ವೃತ್ತ ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಗಾಂಧಿ ಜಯಂತಿ ಇರುವುದರಿಂದ ಯಾವುದೇ ಕಾರಣಕ್ಕೂ ಪುತ್ಥಳಿ ತೆರವು ಮಾಡಬಾರದು. ಸಾರ್ವಜನಿಕರ ಅಭಿಪ್ರಾಯ ಪಡೆದು ಪುತ್ಥಳಿ ತೆರವುಗೊಳಿಸಬೇಕು. ವೃತ್ತ ಅಭಿವೃದ್ಧಿಗೊಂಡ ನಂತರ ಮತ್ತೆ ಪುನರ್ ನಿರ್ಮಾಣ ಮಾಡಬೇಕೆಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು.
ಪುರಸಭೆ ಸದಸ್ಯ ಎಂ.ಎನ್.ಮಂಜು, ರಾಜಕೀಯ ದ್ವೇಷಕ್ಕಾಗಿ ಶಾಸಕ ಬಾಲಕೃಷ್ಣ ಪುತ್ಥಳಿ ತೆರವುಗೊಳಿಸಲು ಮುಂದಾಗಿದ್ದಾರೆ. ಅಧಿಕಾರದ ದರ್ಪ ಸಹಿಸಲು ಸಾಧ್ಯವಿಲ್ಲ ಎಂದರು.
ಏಕಾಏಕಿ ಪುತ್ಥಳಿ ತೆರವು ಮಾಡಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಒಂದು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ ಪೂರ್ಣ ಮಾಡಿಲ್ಲ. ಎನ್ಇಎಸ್ ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಬಿಟ್ಟು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಪುತ್ಥಳಿ ತೆರವಿಗೆ ಮುಂದಾಗಿದ್ದಾರೆ ಎಂದು ಜೆಡಿಎಸ್ ಮುಖಂಡರು, ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಗಿರಿರಾಜ್, ಪ್ರತಿಭಟನೆಯಲ್ಲಿ ತೊಡಗಿದ್ದ ಜೆಡಿಎಸ್ ಮುಖಂಡರನ್ನು ಮನವೊಲಿಸುವ ಕೆಲಸ ಮಾಡಿದರು. ಇದಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ಮುಖಂಡರುಗಳನ್ನು ವಶಕ್ಕೆ ಪಡೆಯಲಾಯಿತು.
ಜೆಡಿಎಸ್ ಮುಖಂಡರಾದ ಎಂ.ಎನ್.ಮಂಜು, ಕೆ.ವಿ.ಬಾಲು, ಮುಖಂಡರಾದ ಕೋಟಪ್ಪ, ರಂಗಣಿ, ವಿಜಯಕುಮಾರ್, ಪಂಚೆ ರಾಮಣ್ಣ, ಶಿವಕುಮಾರ್, ಕುಮಾರ್, ಕರಡಿ ನಾಗರಾಜು, ಬಾಲಕೃಷ್ಣ, ಶಹಬಾಸ್, ಶಿವರಾಮು, ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಅಭಿವೃದ್ಧಿಗೆ ಜೆಡಿಎಸ್ ಅಡ್ಡಗಾಲು
₹1.50 ಕೋಟಿ ವೆಚ್ಚ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ₹35 ಲಕ್ಷ ತಮ್ಮ ಸ್ವಂತ ವೆಚ್ಚದಲ್ಲಿ ಆರು ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲು ಈಗಾಗಲೇ ಅಯೋಧ್ಯೆ ಶ್ರೀರಾಮ ಪ್ರತಿಮೆ ನಿರ್ಮಾಣ ಮಾಡಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ನಿರ್ಮಾಣ ಮಾಡಿಸುತ್ತಿದ್ದಾರೆ. ಜೆಡಿಎಸ್ ಅಭಿವೃದ್ಧಿಗೆ ವಿರೋಧ ಮಾಡುತ್ತಿದೆ. ಈಗ ತೆರವು ಮಾಡಿದ ಗಾಂಧಿ ಪುತ್ಥಳಿಯನ್ನು ಸೂಕ್ತ ಜಾಗದಲ್ಲಿ ಪ್ರತಿಷ್ಠಾಪಿಸಲಾಗುವುದು.ರಮ್ಯಾ ನರಸಿಂಹಮೂರ್ತಿ ಪುರಸಭೆ ಅಧ್ಯಕ್ಷೆ ಶಾಸಕರಿಂದ ದ್ವೇಷದ ರಾಜಕಾರಣ ಶಾಸಕ ಬಾಲಕೃಷ್ಣ ಅವರು ದ್ವೇಷದ ರಾಜಕಾರ ಮುಂದುವರಿಸಿದ್ದಾರೆ. ಮಾಜಿ ಶಾಸಕರ ಹೆಸರು ಇದೆ ಎಂಬ ಕಾರಣಕ್ಕೆ ಅವರ ಗಮನಕ್ಕೂ ಬಾರದೆ ಸಾರ್ವಜನಿಕರ ಚರ್ಚೆಗೂ ತಿಳಿಸದೆ ಏಕಾಏಕಿ ಅಧಿಕಾರ ಮತ್ತು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಪ್ರತಿಭಟನಕಾರರನ್ನು ಬಂಧಿಸಿ ವಿರೋಧದ ನಡುವೆಯೂ ಗಾಂಧಿ ಪುತ್ಥಳಿ ತೆರವು ಮಾಡಿದ್ದಾರೆ. ಇದನ್ನು ತಾಲ್ಲೂಕಿನ ಜನರು ನೋಡುತ್ತಿದ್ದು ಕಾಲವೇ ಇದಕ್ಕೆಲ್ಲ ಉತ್ತರ ನೀಡಲಿದೆ.ವಿಜಯಕುಮಾರ್ ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.