
ರಾಮನಗರದ ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯಲ್ಲಿ ಶಾಂತಲಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ‘ತಿಂಗಳ ಕಲಾ ಬೆಳಕು ಕಾರ್ಯಕ್ರಮ’ದಲ್ಲಿ ಹಿರಿಯ ಗಾಂಧಿವಾದಿ ಎಲ್. ನರಸಿಂಹಯ್ಯ ‘ಶಿಕ್ಷಣ ಕ್ಷೇತ್ರದ ಮರೆಯಲಾಗದ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಮನಗರ: ‘ನನ್ನ ಬದುಕಿಗೆ ದಾರಿ ತೋರುವ ಬೆಳಕು ತೋರಿದವರನ್ನು ಮಹಾತ್ಮ ಗಾಂಧಿ ಪ್ರಮುಖರು. ಸುಸಂಸ್ಕೃತ ವ್ಯಕ್ತಿತ್ವ ಮತ್ತು ಸಮಾಜ ನಿರ್ಮಾಣಕ್ಕೆ ಗಾಂಧೀಜಿ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ’ ಎಂದು ಹಿರಿಯ ಗಾಂಧಿವಾದಿ ಎಲ್. ನರಸಿಂಹಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯಲ್ಲಿ ಶಾಂತಾಲಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ‘ತಿಂಗಳ ಕಲಾ ಬೆಳಕು ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಬಾಪೂಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ನೀಡುವ ನಿಜವಾದ ಗೌರವ ಎಂದರು.
ಗುರು–ಹಿರಿಯರ ಮಾತುಗಳು ಬದುಕಿಗೆ ಧೈರ್ಯ ಮತ್ತು ಬಲ ತಂದು ಕೊಡುತ್ತವೆ. ಆದರ್ಶದ ಮಾರ್ಗದಲ್ಲಿ ಸಾಗಿದರೆ ಜೀವನ ಖುಷಿಯಿಂದ ಕೂಡಿರುತ್ತದೆ. ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬಹುದು ಎಂದು ಹೇಳಿದರು.
ಶಿಕ್ಷಕರಲ್ಲಿ ಉತ್ತಮ ಸಮಾಜವನ್ನು ನಿರ್ಮಿಸುವ ಶಕ್ತಿಯಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯವನ್ನು ಬೋಧಿಸುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿ ಕೊಡಬೇಕು. ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಶಾಲಾಹಂತದಲ್ಲೇ ಅಡಿಪಾಯ ಹಾಕಬೇಕು ಎಂದು ಸಲಹೆ ನೀಡಿದರು.
‘ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರ ಜೀವನ ಮತ್ತು ಆದರ್ಶಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಪ್ರತಿ ತಿಂಗಳು ತಿಂಗಳ ಕಲಾ ಬೆಳಕು ಕಾರ್ಯಕ್ರಮ ಆಯೋಜಿಸುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ನರಸಿಂಹಯ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕರು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಇತರರಿಗೆ ಮಾದರಿಯಾಗುವಂತಹ ಜೀವನ ನಡೆಸಿದ್ದಾರೆ ಎಂದು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಹೇಳಿದರು.
ಎಲ್. ನರಸಿಂಹಯ್ಯ ಅವರಿಗೆ ‘ಶಿಕ್ಷಣ ಕ್ಷೇತ್ರದ ಮರೆಯಲಾಗದ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಯಕಿ ಚಿತ್ರಾ ರಾವ್ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು.
ಹಾರೋಹಳ್ಳಿ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಎಂ.ವಿ. ಶ್ರೀನಿವಾಸನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಲಕ್ಷ್ಮೀಕಾಂತ್, ನಿವೃತ್ತ ವೈದ್ಯಾಧಿಕಾರಿ ಡಾ. ಎನ್.ಜಿ. ರವಿಕುಮಾರ್, ಡಾ. ಎನ್. ಪುರುಷೋತ್ತಮ್, ನಿವೃತ್ತ ಮುಖ್ಯ ಶಿಕ್ಷಕರಾದ ವಿ. ರಾಜು, ಮೊಹಮದ್ ಯಾಕೂಬ್ ಪಾಷಾ, ನಿವೃತ್ತ ಆರೋಗ್ಯಾಧಿಕಾರಿ ಟಿ.ಕೆ. ಆಂಜನಪ್ಪ, ವಿವೇಕಾನಂದ ಯೋಗಾಶ್ರಮದ ಸಂಸ್ಥಾಪಕ ಜಿ.ಎ. ಚಂದ್ರಶೇಖರ್, ಶಿಕ್ಷಕ ರಾಜಶೇಖರ್, ಜಿಲ್ಲಾ ಲೇಖಕರ ವೇದಿಕೆಯ ಕೂ.ಗಿ. ಗಿರಿಯಪ್ಪ ಇದ್ದರು.
ದೈಹಿಕ ಹಿಂಸೆಯಷ್ಟೇ ಹಿಂಸೆಯಲ್ಲ. ನಮ್ಮ ಮಾತು ಕೃತಿ ಹೃದಯ ಮಿದುಳಿನಲ್ಲಿಯೂ ಹಿಂಸೆ ಇರಕೂಡದು. ವೈಯಕ್ತಿಕ ಮತ್ತು ಸಾಮೂಹಿಕ ಜೀವನದಲ್ಲಿಯೂ ಹಿಂಸೆ ಇರಬಾರದು. ಆಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ– ಎಲ್. ನರಸಿಂಹಯ್ಯ ಗಾಂಧಿವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.