
ಚನ್ನಪಟ್ಟಣ: ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮದ ಅಂಗವಾಗಿ ಶನಿವಾರದಿಂದ (ಡಿ.27) ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಸೇರಿದಂತೆ ನಗರದ ಕೆಲವೆಡೆ ತಾಲ್ಲೂಕು ಮಟ್ಟದ ವಿವಿಧ ಕ್ರೀಡೆ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಎಲ್ಲಾ ವರ್ಗದ ಜನರನ್ನು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರದಿಂದ ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಷಟಲ್ ಬಾಡ್ಮಿಂಟನ್, ಫುಟ್ ಬಾಲ್, ಯೋಗಾಸನ, ಮ್ಯಾರಾಥಾನ್ ಓಟ, ವಿಜ್ಞಾನ ಮೇಳ, ಕೇಶ ವಿನ್ಯಾಸ, ನೃತ್ಯ, ಸಂಗೀತ, ರಸಪ್ರಶ್ನೆ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಲಿವೆ. ವಿಜೇತರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.
ಗಂಗೋತ್ಸವದ ಸಂಚಾಲಕ ದುಂತೂರು ವಿಶ್ವಾನಾಥ್, ಸ್ಪರ್ಧೆಗಳ ಮಾಹಿತಿ ಹಂಚಿಕೊಂಡರು. ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಬಿ.ಪಿ.ಮುದ್ದುಕೃಷ್ಣ, ಚಂದ್ರಸಾಗರ್, ಕರುಣ್ ಆನಂದ್, ಸಿಂಗರಾಜಿಪುರ ರಾಜಣ್ಣ, ಅಕ್ಕೂರು ಶೇಖರ್, ಪವಿತ್ರಾ ಪ್ರಭಾಕರ ರೆಡ್ಡಿ, ಕೋಕಿಲ ರಾಣಿ, ವೀರೇಗೌಡ, ಪಿ.ಡಿ.ರಾಜು, ಚೇತನ್ ಕೀಕರ್ ಹಾಜರಿದ್ದರು.
ಅಭಿವೃದ್ಧಿ ಬಿಟ್ಟು ಬೇರೆ ಗೊತ್ತಿಲ್ಲ: ಸಿಪಿವೈ
‘ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದ್ದು ಆ ಬಗ್ಗೆ ಮಾತ್ರ ನಾನು ತಲೆ ಕೆಡಿಸಿಕೊಂಡಿದ್ದೇನೆ. ಉಳಿದ ವಿಚಾರಗಳ ಬಗ್ಗೆ ಗಮನಹರಿಸುತ್ತಿಲ್ಲ. ಅಭಿವೃದ್ಧಿ ಬಿಟ್ಟು ಬೇರೆ ಯೋಚಿಸುತ್ತಿಲ್ಲ’ ಎಂದು ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾಜೂಕಾಗಿ ಉತ್ತರಿಸಿ ಜಾರಿಕೊಂಡ ಅವರು ‘ಪಕ್ಷದ ಹೈಕಮಾಂಡ್ ಈ ಎಲ್ಲಾ ವಿಚಾರ ನೋಡಿಕೊಳ್ಳುತ್ತದೆ. ನನ್ನ ಮುಂದೆ ತಾಲ್ಲೂಕಿನ ಅಭಿವೃದ್ಧಿಯ ಜವಾಬ್ದಾರಿ ಇದೆ’ ಎಂದರು.
‘ಕಳೆದ ಉಪ ಚುನಾವಣೆ ವೇಳೆ ತಾಲ್ಲೂಕಿನ ಜನತೆಗೆ ನೀಡಿದ್ದ ಭರವಸೆಯಂತೆ ಅಭಿವೃದ್ಧಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದೇವೆ. ಅನುದಾನವು ಹಂತಹಂತವಾಗಿ ಬಿಡುಗಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.