ADVERTISEMENT

ಬಿಡದಿ | ಘನ ತ್ಯಾಜ್ಯ ನಿರ್ವಹಣೆಗಿಲ್ಲ ಒತ್ತು; ಎಲ್ಲೆಂದರಲ್ಲಿ ಕಸದ ರಾಶಿ

ಹೆಚ್ಚಿದ ಸೊಳ್ಳೆ ಕಾಟ; ಕೈ ಕಟ್ಟಿ ಕುಳಿತ ಪುರಸಭೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 4:41 IST
Last Updated 9 ಡಿಸೆಂಬರ್ 2024, 4:41 IST
ಬಿಡದಿಯ ಮುಖ್ಯರಸ್ತೆಯಲ್ಲಿ ಪುರಸಭೆಯು ಅಳವಡಿಸಿರುವ ಸೂಚನಾಫಲಕ ಮತ್ತು ಸಿಸಿಟಿವಿ ಕ್ಯಾಮೆರಾ ಜಾಗದಲ್ಲೇ ಇರುವ ಕಸದ ರಾಶಿ
ಪ್ರಜಾವಾಣಿ ಚಿತ್ರಗಳು: ಯೋಗಾನಂದ ಬಿ.ಎನ್
ಬಿಡದಿಯ ಮುಖ್ಯರಸ್ತೆಯಲ್ಲಿ ಪುರಸಭೆಯು ಅಳವಡಿಸಿರುವ ಸೂಚನಾಫಲಕ ಮತ್ತು ಸಿಸಿಟಿವಿ ಕ್ಯಾಮೆರಾ ಜಾಗದಲ್ಲೇ ಇರುವ ಕಸದ ರಾಶಿ ಪ್ರಜಾವಾಣಿ ಚಿತ್ರಗಳು: ಯೋಗಾನಂದ ಬಿ.ಎನ್   

ಬಿಡದಿ: ಪಟ್ಟಣವು ವಿಸ್ತರಣೆಯಾಗಿ ಜನಸಂಖ್ಯೆ ಹೆಚ್ಚಾದಂತೆ ಇಲ್ಲಿರುವ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೊರತೆ ಸ್ವರೂಪವೂ ತೀವ್ರಗೊಳ್ಳುತ್ತಿದೆ. ಕೈಗಾರಿಕಾ ಪ್ರದೇಶದ ಕಾರಣಕ್ಕೆ ಗಮನ ಸೆಳೆಯುವ ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಗಲ್ಲಿಗಳಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುತ್ತಿವೆ.

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ ರಸ್ತೆ ಬದಿಯಲ್ಲಿ ಒಮ್ಮೆ ಕಣ್ಣಾಡಿಸಿದರೆ ಅಲ್ಲಲ್ಲಿ ಕಸದ ರಾಶಿಗಳು ಕಣ್ಣಿಗೆ ಬೀಳುವುದು ಸಾಮಾನ್ಯವಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ ಕಸದ ನಿರ್ವಹಣೆ ಉತ್ತಮಗೊಳ್ಳುವ ಬದಲು ಹದಗೆಡುತ್ತಿದೆ ಎಂಬುದಕ್ಕೆ ಬೀದಿಯಲ್ಲಿರುವ ಕಸದ ತಿಪ್ಪೆಗಳೇ ಸಾಕ್ಷಿ.

ಪಟ್ಟಣವನ್ನು ಹಾದು ಹೋಗಿರುವ ಬೆಂಗಳೂರು–ಮೈಸೂರು ಹೆದ್ದಾರಿ, ಸರ್ವೀಸ್ ರಸ್ತೆ, ಪಟ್ಟಣದ ಮುಖ್ಯರಸ್ತೆ, ನೆಲ್ಲಿಗುಡ್ಡ ಕೆರೆ ರಸ್ತೆ,  ಪೋಲಿಸ್ ಕ್ವಾಟ್ರಸ್ ಬಳಿ, ರೈಲು ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಕಸದ ಬ್ಲ್ಯಾಕ್‌ಸ್ಪಾಟ್‌ಗಳಾಗಿವೆ.

ADVERTISEMENT

ಫಲ ಕೊಡದ ಜಾಗೃತಿ:

‘ಇತ್ತೀಚೆಗೆ ಪುರಸಭೆಯು ಪಟ್ಟಣದಲ್ಲಿ ಕೆಲ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿತ್ತು. ಕಸದ ತಾಣಗಳಾಗಿದ್ದ ರಸ್ತೆ ಬದಿ, ಖಾಲಿ ನಿವೇಶನ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಮತ್ತೆ ಅಲ್ಲಿ ಕಸ ಎಸೆಯದಂತೆ ಸೂಚನಾ ಫಲಕದ ಜೊತೆಗೆ ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು’ ಎಂದು ಸ್ಥಳೀಯ ನಿವಾಸಿ ಯೋಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸುವ ಕೆಲಸಕ್ಕೂ ಚಾಲನೆ ನೀಡಿತ್ತು. ಎಲ್ಲೆಂದರಲ್ಲಿ ಕಸ ಎಸೆಯುವವವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ಸಹ ಸೂಚನಾ ಫಲಕದಲ್ಲಿ ನೀಡಲಾಗಿತ್ತು. ಆದರೆ, ಇವೆಲ್ಲವೂ ಆರಂಭ ಶೂರತ್ವವಾದವೇ ಹೊರತು ಆಚರಣೆಗೆ ಬರಲಿಲ್ಲ. ಪುರಸಭೆಯು ಎಂದಿನಂತೆ ಕೈ ಚೆಲ್ಲಿ ಕುಳಿತುಕೊಂಡಿದ್ದರಿಂದ ಮತ್ತೆ ಕಸದ ರಾಶಿಗಳು ಎದ್ದು ಕುಳಿತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬೀದಿನಾಯಿ, ಸೊಳ್ಳೆ ಕಾಟ:

ರಸ್ತೆ ಬದಿಯಲ್ಲಿರುವ ಕಸದ ರಾಶಿಯಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ತರಕಾರಿ, ಅಡುಗೆ ಮನೆಯ ಮುಸುರೆ ಸೇರಿದಂತೆ ವಿವಿಧ ರೀತಿಯ ಕಸವನ್ನು ಜನರು ರಸ್ತೆ ಬದಿ, ಖಾಲಿ ನಿವೇಶನ ಹಾಗೂ ಚರಂಡಿ ಬದಿ ತಂದು ಎಸೆಯುತ್ತಾರೆ. ಪುರಸಭೆಯವರು ನಿತ್ಯ ಕಸವನ್ನು ತೆರವು ಮಾಡದಿರುವುದರಿಂದ ಕಸವು ಕೊಳೆತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಜೊತೆಗೆ ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ.

‘ಕಸದ ಕಾರಣಕ್ಕೆ ಸೊಳ್ಳೆಗಳು ಹೆಚ್ಚಾಗಿದೆ. ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಬದುಕುವಂತಾಗಿದೆ. ಕೆಲವೊಮ್ಮೆ ರಸ್ತೆಯಲ್ಲಿ ಮೂಗು ಹಿಡಿದುಕೊಂಡು ಓಡಾಡುವಂತೆ ಕಸವು ದುರ್ನಾತ ಬೀರುತ್ತದೆ. ಇದರ ಜೊತೆಗೆ ಚರಂಡಿಗಳಲ್ಲೂ ಕಸ ಕಟ್ಟಿಕೊಂಡು ಕೆಲವೊಮ್ಮೆ ರಸ್ತೆ ಮೇಲೆ ಕೊಳಚೆ ಹರಿಯುತ್ತದೆ. ಮಳೆ ಬಂದಾಗ ರಸ್ತೆಗಳ ಸ್ಥಿತಿ ಹೇಳತೀರದು’ ಎಂದು ಸ್ಥಳೀಯರಾದ ರಾಜೇಶ್ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪಟ್ಟಣದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿದರು. ಕಸ ನಿರ್ವಹಣೆ ಜೊತೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆಯ ಬಗ್ಗೆ ಅರಿವು ಮೂಡಿಸಿದ್ದರು. ಆದರೂ, ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಪಟ್ಟಣದ ಕಸದ ಸಮಸ್ಯೆ ಚರ್ಚೆಗೆ ಬಂದಿತು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ನಿವಾರಿಸುವತ್ತ ಗಮನ ಹರಿಸಬೇಕಿದೆ.

‘ತ್ಯಾಜ್ಯ ಇಂಧನ ಘಟಕಕ್ಕೆ ಕಸ’ ‍

ಪಟ್ಟಣದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ವಿಂಗಡಿಸಿ ಒಣ ಕಸವನ್ನು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌ಗೆ) ಆರಂಭಿಸಿರುವ ತ್ಯಾಜ್ಯ ಇಂಧನ ಘಟಕಕ್ಕೆ ನೀಡಲು ಇತ್ತೀಚೆಗೆ ನಡೆದ ಪುರಸಭೆಯ ಸಾಮಾನ್ಯಸಭೆಯಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಸೂಚಿಸಿದರು. ಅದಕ್ಕೆ ಕೆಪಿಸಿಎಲ್‌ ಸಹ ಒಪ್ಪಿಗೆ ನೀಡಿದೆ. ಬೈರಮಂಗಲ ರಸ್ತೆಯಲ್ಲಿರುವ ಘಟಕಕ್ಕೆ ಪಟ್ಟಣದ ಕಸವು ಸದ್ಯದಲ್ಲೇ ಹೋಗಲಿದೆ’ ಎಂದು ಪುರಸಭೆ ಅಧ್ಯಕ್ಷ ಹರಿಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ 4 ಟನ್ ಕಸ ಸಂಗ್ರಹ’

‘ಪಟ್ಟಣದಲ್ಲಿ ನಿತ್ಯ ಮೂರರಿಂದ ನಾಲ್ಕು ಟನ್ ಕಸ ಸಂಗ್ರಹವಾಗುತ್ತಿದೆ. ಮನೆ ಮನೆಗಳಿಂದ ಕಸ ಸಂಗ್ರಹಿಸಲು ಮತ್ತು ಬೀದಿಗಳಲ್ಲಿ ಎಸೆಯುವ ಕಸವನ್ನು ತೆರವುಗೊಳಿಸಲು 8 ತ್ಯಾಜ್ಯ ಸಂಗ್ರಹ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾಹನಕ್ಕೆ ಚಾಲಕ ಸೇರಿ ಇಬ್ಬರು ಇರಲಿದ್ದಾರೆ. ಮುಂಚೆ ಒಣ ಕಸವನ್ನು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ಖಾಸಗಿ ಕಾರ್ಖಾನೆಗೆ ಕಳುಹಿಸಲಾಗುತ್ತಿತ್ತು. ಇತ್ತೀಚೆಗೆ ಕಾರ್ಖಾನೆಯಲ್ಲಿ ಸಮಸ್ಯೆಯಾಗಿರುವುದರಿಂದ ಕಸ ಸ್ವೀಕರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಯಲ್ಲಿ ಶಾಸಕರು ಸೂಚಿಸಿರುವಂತೆ ಬೈರಮಂಗಲ ರಸ್ತೆಯಲ್ಲಿರುವ ಕೆಪಿಸಿಎಲ್‌ನ ತ್ಯಾಜ್ಯ ಇಂಧನ ಘಟಕಕ್ಕೆ ಒಣ ಕಸವನ್ನು ಕಳುಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ಹೇಳಿದರು.

ನಿತ್ಯ ಬಾರದ ಕಸದ ವಾಹನ

ಪಟ್ಟಣದ ಕೆಲ ಬೀದಿಗಳಿಗೆ ಕಸ ಸಂಗ್ರಹಿಸುವ ಪುರಸಭೆಯ ವಾಹನಗಳು ನಿತ್ಯ ಬಾರದೆ ಎರಡ್ಮೂರು ದಿನಕ್ಕೊಮ್ಮೆ ಬರುತ್ತದೆ. ಇದರಿಂದಾಗಿ ಸ್ಥಳೀಯರು ಕಸವನ್ನು ಮನೆಯಲ್ಲೇ ಇಟ್ಟುಕೊಂಡರೆ ಗಬ್ಬು ನಾರುತ್ತದೆ ಎಂದು ಜನ ಅನಿವಾರ್ಯವಾಗಿ ಬೀದಿ ಬದಿಗೆ ಅಥವಾ ಸಮೀಪದ ಖಾಲಿ ನಿವೇಶನಕ್ಕೆ ಪ್ಲಾಸ್ಟಿಕ್‌ನಲ್ಲಿ ತಂದು ಎಸೆಯುತ್ತಾರೆ. ವಾಹನ ನಿತ್ಯ ಬಂದರೆ ಜನ ಕಸ ಎಸೆಯುವುದು ತಪ್ಪಲಿದೆ. ಅಲ್ಲದೆ ಪುರಸಭೆಯ ಅಧಿಕಾರಿಗಳು ಸಹ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಕಚೇರಿಯಲ್ಲೇ ಕುಳಿತಿರುತ್ತಾರೆ. ಹೀಗಾದರೆ ಅವರಿಗೆ ಪಟ್ಟಣದ ನಾಗರಿಕ ಸಮಸ್ಯೆಗಳು ಹೇಗೆ ಗಮನಕ್ಕೆ ಬರಬೇಕು ಎನ್ನುತ್ತಾರೆ ಸಾರ್ವಜನಿಕರು.

ವಾಹನವು ನಿತ್ಯ ಹೋದರೂ ಕೆಲವರು ಕಸ ತಂದು ಕೊಡುವುದಿಲ್ಲ.  ಬೆಳಿಗ್ಗೆ ಅಥವಾ ರಾತ್ರಿ ಯಾರಿಗೂ ಗೊತ್ತಾಗದಂತೆ ಬೈಕ್‌ಗಳಲ್ಲಿ ಕಸ ತಂದು ರಸ್ತೆ ಬದಿ ಎಸೆದು ಹೋಗುತ್ತಾರೆ. ಹೀಗಾದರೆ ನಾವು ಏನು ಮಾಡೋದು? ನಿವೇಶನವನ್ನು ಖಾಲಿ ಬಿಟ್ಟುಕೊಂಡಿರುವವರು ಸುತ್ತಲೂ ಕಾಂಪೌಂಡ್ ಹಾಕಿಕೊಂಡರೆ ಯಾರೂ ಕಸ ಹಾಕುವುದಿಲ್ಲ. ಆದರೆ ಅವರು ಸುಮ್ಮನೆ ಬಿಡುವುದರಿಂದ ಅಕ್ಕಪಕ್ಕದವರು ಕಸ ತಂದು ಹಾಕುವುದು ಸಾಮಾನ್ಯವಾಗಿದೆ ಎಂದು ಪುರಸಭೆಯ ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

ಪಟ್ಟಣದ ನೈರ್ಮಲ್ಯ ಕಾಪಾಡುವುದು ಕೇವಲ ಪುರಸಭೆಯ ಹೊಣೆಯಷ್ಟೇ ಅಲ್ಲ. ನಾಗರಿಕರು ಸಹ ತಮ್ಮ ಕರ್ತವ್ಯ ನಿಭಾಯಿಸಬೇಕು. ಎಲ್ಲೆಂದರಲ್ಲ ಕಸ ಎಸೆಯದೆ ತಮ್ಮ ಬೀದಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು.
ಸತೀಶ್, ಸ್ಥಳೀಯ ನಿವಾಸಿ
ಪಟ್ಟಣದಲ್ಲಿರುವ ಕಸದ ರಾಶಿಗಳನ್ನು ನೋಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರದ ಭವಿಷ್ಯದ ಆತಂಕವಾಗುತ್ತದೆ. ಇದಕ್ಕೆ ಪುರಸಭೆಯ ನಿರ್ಲಕ್ಷ್ಯದ ಜೊತೆಗೆ ಹೊಣೆಗಾರಿಕೆ ಮರೆತಿರುವ ನಾಗರಿಕರು ಸಹ ಕಾರಣ. ಇಬ್ಬರಲ್ಲೂ ಬದಲಾವಣೆ ಆಗಬೇಕಿದೆ.
ಸುರೇಶ್, ಕೆಂಚನಕುಪ್ಪೆ ನಿವಾಸಿ
ಕೇತಗಾನಹಳ್ಳಿ ಸಂಪರ್ಕಿಸುವ ರಸ್ತೆ ಬದಿ ಇರುವ ಕಸದ ರಾಶಿ
ಬಿಡದಿ ಪಟ್ಟಣದ ಖಾಲಿ ನಿವೇಶನವು ಕಸದ ತಿಪ್ಪೆಯಾಗಿರುವುದು
ನೆಲ್ಲಿಗುಡ್ಡ ಕೆರೆ ರಸ್ತೆಯ ಖಾಲಿ ನಿವೇಶನದಲ್ಲಿರುವ ಕಸದ ರಾಶಿ
ಬಿಡದಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿಯ ಕಸದ ರಾಶಿ
ಪಟ್ಟಣದ ಖಾಸಗಿ ಲೇಔಟ್ ರಸ್ತೆಯ ಬದಿಯ ಇರುವ ಕಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.