
ರಾಮನಗರ: ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮಹತ್ವದ ಘಟ್ಟವಾಗಿದೆ. ಶಾಲಾ ಹಂತದಿಂದ ಕಾಲೇಜು ಹಂತದ ಪ್ರವೇಶಕ್ಕೆ ಏಣಿಯಾಗುವ ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ತಿರುವು ನೀಡುತ್ತದೆ. ಹಾಗಾಗಿಯೇ, ಪರೀಕ್ಷೆ ಬಂದರೆ ವಿದ್ಯಾರ್ಥಿಗಳ ಜೊತೆಗೆ ಪೋಷಕರಲ್ಲೂ ಒಂದು ರೀತಿಯ ಆತಂಕ ಶುರುವಾಗುತ್ತದೆ.
ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಪರೀಕ್ಷೆ ಕುರಿತು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡ ನಿವಾರಿಸಿ, ಫಲಿತಾಂಶ ಸುಧಾರಿಸಲು ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇವೆ. ಅಂತಹದ್ದೇ ಒಂದು ವಿಶೇಷ ಪ್ರಯತ್ನವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಅವರು ಬಿಡದಿ ಹೋಬಳಿಯಲ್ಲಿ ಮಾಡಿದ್ದಾರೆ.
ಹೋಬಳಿಯ ಕೆಲ ಗ್ರಾಮಗಳಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಭೇಟಿ ನೀಡುತ್ತಿರುವ ನಟರಾಜ್, ವಿದ್ಯಾರ್ಥಿಗಳಿಗೆ ಪರೀಕ್ಷಾ ಆತಂಕ ಬಿಟ್ಟು ಆತ್ಮವಿಶ್ವಾಸದಿಂದ ಓದುವಂತೆ ಆತ್ಮೀಯವಾಗಿ ತಿಳಿ ಹೇಳುತ್ತಿದ್ದಾರೆ. ಆ ಮೂಲಕ ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಸಹ ಸಾಥ್ ನೀಡುತ್ತಿದ್ದಾರೆ.
ವೃದ್ಧೆಯ ಕಾಳಜಿ: ‘ಬನ್ನಿಕುಪ್ಪೆ ಬಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿ, ಬೋರೆಹಳ್ಳಿ, ಗಾಣಕಲ್, ಮುತ್ತರಾಯನ ಗುಡಿಪಾಳ್ಯ, ಸಿದ್ದಬೋವಿಪಾಳ್ಯ ಗ್ರಾಮಗಳಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಹೊತ್ತು ಅನಿರೀಕ್ಷಿತ ಭೇಟಿ ನೀಡುತ್ತಿರುವೆ. ಈ ವೇಳೆ ಗುಡ್ಡಹಳ್ಳಿಯಲ್ಲಿ ಭೈರಮ್ಮ ಎಂಬ ವೃದ್ಧೆ ನಾಲ್ವರು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿ ಓದಿಸುತ್ತಿದ್ದ ದೃಶ್ಯ ಕಂಡುಬಂತು’ ಎಂದು ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾನು ಅನಕ್ಷರಸ್ಥೆಯಾದರೂ ತಮ್ಮ ಕುಟುಂಬದ ಮಕ್ಕಳು ವಿದ್ಯೆ ಕಲಿತು ಮುಂದೆ ಉತ್ತಮ ಸ್ಥಾನಮಾನ ಗಳಿಸಬೇಕೆಂಬ ಹೆಬ್ಬಯಕೆ ಆ ವೃದ್ಧೆಯಲ್ಲಿತ್ತು. ನಾವಂತೂ ಓದಲಿಲ್ಲ. ನಮ್ಮನೆ ಮಕ್ಕಳಾದರೂ ಓದಿ ಚನ್ನಾಗಿ ಬದುಕಲಿ ಎಂದು ಆ ವೃದ್ಧೆ ಹೇಳಿದಾಗ, ಮನದುಂಬಿ ಬಂತು. ಬಳಿಕ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಬಗ್ಗೆ ವಿಚಾರಿಸಿ ಚನ್ನಾಗಿ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದೆ’ ಎಂದು ಹೇಳಿದರು.
‘ಬೋರೆಹಳ್ಳಿಯಲ್ಲಿರುವ ಮನೆಯೊಂದರಲ್ಲಿ ವಿದ್ಯಾರ್ಥಿಗಳು ಮೇಷ್ಟ್ರು ಕೊಟ್ಟಿರುವ ವೇಳಾಪಟ್ಟಿಯಂತೆ ಅಧ್ಯಯನದಲ್ಲಿ ತೊಡಗಿದ್ದರು. ಮನೆಯ ಹೊರಾಂಗಣದಲ್ಲಿ ಶ್ರದ್ಧೆಯಿಂದ ಓದುತ್ತಿದ್ದರು. ಮನೆಯವರು ಮಕ್ಕಳಿಗೆ ಒಂಚೂರು ತೊಂದರೆ ಆಗಬಾರದೆಂದು ಟಿ.ವಿ ಸಹ ಬಂದ್ ಮಾಡಿದ್ದು ಕಂಡುಬಂತು’ ಎಂದರು.
‘ಗಾಣಕಲ್ ಗ್ರಾಮದಲ್ಲಿ ಶಿವರುದ್ರಯ್ಯ ಮತ್ತು ವಿನುತಾ ಎಂಬುವರ ಮನೆಗೆ ಮನೆಪಾಠಕ್ಕೆ ಬಂದಿದ್ದ ಏಳು ವಿದ್ಯಾರ್ಥಿಗಳು ಓದುತ್ತ ಕುಳಿತಿದ್ದರು. ಓದಿದ ವಿಷಯವನ್ನು ಒಬ್ಬರಿಗೊಬ್ಬರು ಚರ್ಚಿಸಿ ಮನನ ಮಾಡಿಕೊಳ್ಳುತ್ತಿದ್ದರು. ಭೇಟಿಯಾದ ಎಲ್ಲಾ ವಿದ್ಯಾರ್ಥಿಗಳಲ್ಲೂ ಆಪ್ತ ಸಂವಾದ ನಡೆಸಿ ಪರೀಕ್ಷೆ ಆತಂಕ ಮತ್ತು ಒತ್ತಡವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಹೇಳಿದೆ’ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮನೆಗೆ ಗಣ್ಯರು ಭೇಟಿ ನೀಡಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ತುಂಬುತ್ತಿರುವುದು ವಿಶೇಷವಾಗಿದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸಿ ಪರೀಕ್ಷೆಯನ್ನು ಚನ್ನಾಗಿ ಎದುರಿಸಲು ಮತ್ತಷ್ಟು ಉತ್ಸಾಹ ತುಂಬುತ್ತದೆಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ ತಾಲ್ಲೂಕು
‘ಹೆಚ್ಚಿನ ಫಲಿತಾಂಶದ ವಿಶ್ವಾಸ’
‘ವಿದ್ಯಾರ್ಥಿಗಳ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಮೇತ ಅನಿರೀಕ್ಷಿತವಾಗಿ ನೀಡಿದ ಭೇಟಿಗೆ ವಿದ್ಯಾರ್ಥಿಗಳು ಸ್ವಲ್ಪ ಶಾಕ್ ಆದರೂ ಅವರಲ್ಲಿ ಉತ್ತಮ ಫಲಿತಾಂಶ ಗಳಿಸುವ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಗಳ ಈ ಮನೋಭಾವ ಗಮನಿಸಿದರೆ ನಮ್ಮ ಜಿಲ್ಲೆಯಲ್ಲಿ ಈ ಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಹಿಂದಿಗಿಂತಲೂ ಹೆಚ್ಚು ಬರುವುದರಲ್ಲಿ ಅನುಮಾನವಿಲ್ಲ ಎನಿಸಿತು’ ಎಂದು ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.