ADVERTISEMENT

ರಾಮನಗರ: ಪರಿಹಾರ ದರಕ್ಕೆ ಜಿಬಿಡಿಎ ಒಪ್ಪಿಗೆ

ಬಿಡದಿ ಹೋಬಳಿಯಲ್ಲಿ ಜಿಬಿಐಟಿ ಟೌನ್‌ಶಿಪ್‌ ಯೋಜನೆ: ಕೌಶಲ ತರಬೇತಿ ಕೇಂದ್ರ ಸ್ಥಾಪನೆಗೆ ಅಸ್ತು, ಮಾಸ್ಟರ್‌ ಪ್ಲಾನ್‌ಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 2:49 IST
Last Updated 5 ಡಿಸೆಂಬರ್ 2025, 2:49 IST
ಬೆಂಗಳೂರಿನಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ಎಚ್.ಸಿ. ಬಾಲಕೃಷ್ಣ, ಪ್ರಾಧಿಕಾರದ ನಿರ್ದೇಶಕರಾದ ಡಿ.ಕೆ. ಸುರೇಶ್, ಎನ್. ನರಸಿಂಹಯ್ಯ, ಪ್ರಾಧಿಕಾರದ ಆಯುಕ್ತ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಇತರರು ಇದ್ದಾರೆ
ಬೆಂಗಳೂರಿನಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ಎಚ್.ಸಿ. ಬಾಲಕೃಷ್ಣ, ಪ್ರಾಧಿಕಾರದ ನಿರ್ದೇಶಕರಾದ ಡಿ.ಕೆ. ಸುರೇಶ್, ಎನ್. ನರಸಿಂಹಯ್ಯ, ಪ್ರಾಧಿಕಾರದ ಆಯುಕ್ತ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಇತರರು ಇದ್ದಾರೆ   

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಗೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ನಿಗದಿಪಡಿಸಿರುವ ಪರಿಹಾರ ದರಕ್ಕೆ ಒಪ್ಪಿಗೆ ಸೂಚಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಸಾಮಾನ್ಯ ಸಭೆಯು, ಯೋಜನೆಯ ಮಾಸ್ಟರ್ ಪ್ಲಾನ್ ತಯಾರಿಸಲು ಅನುಮೋದನೆ ನೀಡಿದೆ.

ಬೆಂಗಳೂರಿನಲ್ಲಿರುವ ಬಿಎಂಆರ್‌ಡಿಎ ಕಚೇರಿ ಸಂಕೀರ್ಣದಲ್ಲಿರುವ ಜಿಬಿಡಿಎ ಸಭಾಂಗಣದಲ್ಲಿ ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 8ನೇ ಸಾಮಾನ್ಯ ಸಭೆಯು, ಪರಿಹಾರ ದರಕ್ಕೆ ಸಮ್ಮತಿ ಸೂಚಿಸುವ ಜೊತೆಗೆ ಅದಕ್ಕೆ ಅನುಮೋದನೆ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಣಯ ಕೈಗೊಂಡಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಟರಾಜ್, ‘ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ನಿಗದಿಪಡಿಸಿರುವ ಪರಿಹಾರ ದರವನ್ನು ಭೂ ಮಾಲೀಕರಿಗೆ ಪಾವತಿಸಲು ಸರ್ಕಾರದ ಅನುಮೋದನೆ ಪಡೆಯಬೇಕಿದೆ. ಹಾಗಾಗಿ, ತಮ್ಮೆಲ್ಲರ ಸಮ್ಮತಿ ಮತ್ತು ಅಭಿಪ್ರಾಯ ಆಧರಿಸಿ ಸರ್ಕಾರಕ್ಕೆ ಕಳಿಸಲಾಗುವುದು’ ಎಂದು ಹೇಳಿದರು.

ADVERTISEMENT

ಸಭೆಯಲ್ಲಿದ್ದ ಯೋಜನಾ ಪ್ರದೇಶದ ಮಾಗಡಿ ಶಾಸಕ ಬಾಲಕೃಷ್ಣ, ಜಿಬಿಡಿಎ ನಿರ್ದೇಶಕ ಡಿ.ಕೆ. ಸುರೇಶ್ ಸೇರಿದಂತೆ ಇತರ ನಿರ್ದೇಶಕರು ಪರಿಹಾರ ದರಕ್ಕೆ ಒಪ್ಪಿಗೆ ಸೂಚಿಸಿದರು. ಗರಿಷ್ಠ ಪರಿಹಾರ ನಿಗದಿಗೆ ಶ್ರಮಿಸಿರುವ ಜಿಲ್ಲಾಧಿಕಾರಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ‘ಸರ್ಕಾರದಿಂದ ತುರ್ತಾಗಿ ಅನುಮೋದನೆ ಪಡೆದು ಮುಂದಿನ ಜನವರಿ ತಿಂಗಳ ಅಂತ್ಯದೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಮಾಸ್ಟರ್ ಪ್ಲಾನ್‌ಗೆ ಅನುಮೋದನೆ: ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಉಪನಗರ ಮತ್ತು ಎ.ಐ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಮಾಸ್ಟರ್ ಪ್ಲಾನ್ ತಯಾರಿಸಲು ಸಭೆಯು ಒಪ್ಪಿಗೆ ನೀಡಿತು.

‘ಜಿಬಿಐಟಿ-ಎಐಸಿಟಿ ನಿರ್ಮಾಣಕ್ಕೆ ಮೂಲ ಯೋಜನೆ ಸಿದ್ದಪಡಿಸಬೇಕಿದೆ. ಉದ್ಯಮ, ವಸತಿ, ವಾಣಿಜ್ಯ ಪ್ರದೇಶ, ರಸ್ತೆ, ಉದ್ಯಾನ ಸೇರಿದಂತೆ ಹೊಸ ನಗರದ ರೂಪುರೇಷೆ ನಿರ್ಮಾಣದ ಬಗ್ಗೆ ಪ್ರಾಧಿಕಾರ ಸಮಗ್ರ ಯೋಜನೆಯನ್ನು ಸಿದ್ದಪಡಿಸಲಿದೆ’ ಎಂದು ನಟರಾಜ್ ಸಭೆ ಗಮನಕ್ಕೆ ತಂದರು. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

ಕೌಶಲ ಕೇಂದ್ರಕ್ಕೆ ಒಪ್ಪಿಗೆ: ಉಪನಗರ ಯೋಜನಾ ಪ್ರದೇಶದಲ್ಲಿ ನಿರದ್ಯೋಗಿಗಳಿಗೆ ಹಾಗೂ ಯುವಜನರಿಗೆ ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಉದ್ಯೋಗಳಿಗೆ ಅನುಕೂಲವಾಗುವಂತೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಕೌಶಲ ಮತ್ತು ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಲು ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಯಿತು.

ತರಬೇತಿ ಕೇಂದ್ರದಲ್ಲಿ ಯೋಜನಾ ನಿರಾಶ್ರಿತರ ಕುಟುಂಬಗಳ ವಿದ್ಯಾವಂತ ಯುವಕ– ಯುವತಿಯರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ತರಬೇತಿ ನೀಡಿ, ಮುಂದೆ ಉಪನಗರದಲ್ಲಿ ಸ್ಥಾಪನೆಯಾಗಲಿರುವ ಉದ್ಯಮಗಳಲ್ಲಿ ಉದ್ಯೋಗ ನೀಡಲು ಈಗಿನಿಂದಲೇ ಅವರನ್ನು ಅಣಿಗೊಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಯಿತು.

ಸಭೆಯಲ್ಲಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಜಿಬಿಡಿಎ ನಿರ್ದೇಶಕರಾದ ಡಿ.ಕೆ. ಸುರೇಶ್, ಶೇಷಗಿರಿಹಳ್ಳಿ ಎನ್. ನರಸಿಂಹಯ್ಯ, ಸಿ.ಎಚ್. ಪುಟ್ಟರಾಜು, ಕಲ್ಯಾಣಮ್ಮ, ಜಿಬಿಡಿಎ ಆಯುಕ್ತ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನ, ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

‘ಜನವರಿ ತಿಂಗಳಾಂತ್ಯದಿಂದ ಪರಿಹಾರಕ್ಕೆ ಕ್ರಮ’

‘ಬೆಂಗಳೂರು ಹೊರವಲಯದಲ್ಲಿ ಅತ್ಯಾಧುನಿಕ ಉಪನಗರ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಮೊದಲಿಗೆ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಭೂ ಸ್ವಾಧೀನಕ್ಕೆ ನಿಗದಿಪಡಿಸಿರುವ ಪರಿಹಾರ ದರವು ದೇಶದಲ್ಲೇ ಅತಿ ಹೆಚ್ಚಿನದ್ದು. ಅದಕ್ಕೆ ಪ್ರಾಧಿಕಾರದ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿದ್ದು ಸರ್ಕಾರದ ಅನುಮೋದನೆಗೆ ಕಳಿಸಲು ತೀರ್ಮಾನಿಸಲಾಗಿದೆ. ಅಲ್ಲಿ ಬೇಗನೆ ಅನುಮೋದನೆ ಸಿಗುವ ವಿಶ್ವಾಸವಿದ್ದು ಜನವರಿ ತಿಂಗಳಾಂತ್ಯದಿಂದ ಪರಿಹಾರ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್ ತಿಳಿಸಿದರು.