ADVERTISEMENT

ರಾಮನಗರ: ಅದ್ಧೂರಿ ಗಿಂಡಿ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 2:19 IST
Last Updated 12 ಜುಲೈ 2025, 2:19 IST
ರಾಮನಗರದ ಟ್ರೂಪ್‌ಲೇನ್‌ನಲ್ಲಿರುವ ಬಂಡಿ ಮಹಾಂಕಾಳಿ ದೇವಿಯ ಗಿಂಡಿ ಕರಗ ಮಹೋತ್ಸವ ಅದ್ಧೂರಿಯಾಗಿ ಜರುಗಿತು
ರಾಮನಗರದ ಟ್ರೂಪ್‌ಲೇನ್‌ನಲ್ಲಿರುವ ಬಂಡಿ ಮಹಾಂಕಾಳಿ ದೇವಿಯ ಗಿಂಡಿ ಕರಗ ಮಹೋತ್ಸವ ಅದ್ಧೂರಿಯಾಗಿ ಜರುಗಿತು   

ರಾಮನಗರ: ನಗರದ ಟ್ರೂಪ್‌ಲೇನ್‌ನಲ್ಲಿರುವ ಬಂಡಿ ಮಹಾಂಕಾಳಿ ದೇವಿಯ ಗಿಂಡಿ ಕರಗ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಕರಗ ಕಣ್ತುಂಬಿಕೊಂಡು, ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಂಡರು. ಸಿ. ಹರೀಶ್ ಅವರು ಸತತ 8ನೇ ವರ್ಷ ಕರಗಧಾರಣೆ ಮಾಡಿದ್ದರು.

ಬೆಳಿಗ್ಗೆಯೇ ದೇವಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ, ತಂಬಿಟ್ಟಿನ ಆರತಿ ನಡೆಯಿತು. ರಾತ್ರಿ ದೇವಿಯ ಮೆರವಣಿಗೆ ನಡೆಯಿತು. ತಮಟೆ ವಾದ್ಯದ ಸಾಥ್ ಮೆರವಣಿಗೆಗೆ ಮೆರಗು ತಂದಿತು. ಬೆಳಿಗ್ಗೆ 9 ಗಂಟೆಗೆ ಕೋದಂಡರಾಮ ಭಜನಾ ಮಂದಿರದಿಂದ ಹೊರಟ ಗಿಂಡಿ ಕರಗ, ಬಡಾವಣೆಯ ಬಂಡಿ ಮಹಾಂಕಾಳಿ ಅಮ್ಮನವರ ದೇವಸ್ಥಾನ‌ ತಲುಪಿ ಸಂಪನ್ನಗೊಂಡಿತು. 

‘ಟ್ರೂಪ್‌ಲೇನ್‌ನ ಆರಾಧ್ಯ ದೇವತೆಯಾದ ಅಮ್ಮನವರ ಕರಗವನ್ನು ನೂರಾರು ವರ್ಷಗಳಿಂದ ಜಾತಿ ಹಾಗೂ ಧರ್ಮದ ಬೇಧವಿಲ್ಲದೆ, ಎಲ್ಲರೂ ಸೌಹಾರ್ದದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಹಿಂದೆ ಕಾಲರಾ, ಪ್ಲೇಗ್‌ನಂತಹ ಮಾರಣಾಂತಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದರು’ ಎಂದು ದೇವಸ್ಥಾನದ ಅರ್ಚಕ ಹಾಗೂ ಗಿಂಡಿ ಕರಗಧಾರಕ ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರೋಗಪೀಡಿತರಿಗೆ ಆಯುರ್ವೇದ ಚಿಕಿತ್ಸೆ ಕೊಡಿಸಲು ಜನ ಬಂಡಿಯಲ್ಲಿ ಅಮ್ಮನ ಬಳಿಗೆ ಬರುತ್ತಿದ್ದರು‌. ಅಮ್ಮ ಎಲ್ಲರಿಗೂ ಚಿಕಿತ್ಸೆ ನೀಡಿ ಸಾವಿನಿಂದ ಪಾರು ಮಾಡುತ್ತಿದ್ದಳು. ಹಾಗಾಗಿ, ಅಮ್ಮನಿಗೆ ಬಂಡಿ ಮಹಾಂಕಾಳಿ ಎಂಬ ಹೆಸರು ಬಂತು. ದೇವಿ ಹೆಸರಿನಲ್ಲಿ ಅಂದಿನಿಂದ ಕರಗ ಮಹೋತ್ಸವ ಜರುಗುತ್ತಿದೆ’ ಎಂದು ಕರಗದ ಹಿನ್ನೆಲೆಯ ಕುರಿತು ಹೇಳಿದರು.

ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಸೇವಾ ಸಮಿತಿಯಿಂದ ಭಕ್ತರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ಮಾಡಲಾಯಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯಿಷ ಬಾನು, ಸದಸ್ಯರು, ದಲಿತ ಮುಖಂಡ ಶಿವಕುಮಾರಸ್ವಾಮಿ ಸೇರಿದಂತೆ ಹಲವರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.