ADVERTISEMENT

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌: ಗಾಲ್ಫ್‌ ಚಟುವಟಿಕೆ ಬಂದ್‌

ನ್ಯಾಯಾಲಯದ ಆದೇಶ ಪಾಲನೆ; ಯಥಾಸ್ಥಿತಿ ಮುಂದುವರಿಕೆ

ಆರ್.ಜಿತೇಂದ್ರ
Published 25 ಅಕ್ಟೋಬರ್ 2021, 20:54 IST
Last Updated 25 ಅಕ್ಟೋಬರ್ 2021, 20:54 IST
ಈಗಲ್‌ಟನ್ ಗಾಲ್ಫ್‌ ಅಂಗಳದ ಸದ್ಯದ ಚಿತ್ರಣ
ಈಗಲ್‌ಟನ್ ಗಾಲ್ಫ್‌ ಅಂಗಳದ ಸದ್ಯದ ಚಿತ್ರಣ   

ರಾಮನಗರ: ಬಿಡದಿಯ ಈಗಲ್‌ಟನ್ ಗಾಲ್ಫ್‌ ರೆಸಾರ್ಟ್‌ನಿಂದ ಭೂ ಒತ್ತುವರಿ ಪ್ರಕರಣವು ಮತ್ತೆ ನ್ಯಾಯಾಲಯದ ಅಂಗಳ ತಲುಪಿದ್ದು, ಸದ್ಯ ನಿಷೇಧಿತ ಪ್ರದೇಶದಲ್ಲಿ ಗಾಲ್ಫ್‌ ಸೇರಿದಂತೆ ಎಲ್ಲ ಚಟುವಟಿಕೆಗಳು ಬಂದ್ ಆಗಿವೆ.

ಒತ್ತುವರಿ ಮಾಡಿಕೊಂಡಿರುವ 77 ಎಕರೆ 19 ಗುಂಟೆ ಜಮೀನಿಗೆ ಪ್ರತಿಯಾಗಿ ಈಗಿನ ಮಾರುಕಟ್ಟೆ ಮೌಲ್ಯದಂತೆ ₹982 ಕೋಟಿ ದಂಡ ಪಾವತಿಸಬೇಕು ಎನ್ನುವ ಆದೇಶವನ್ನು ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿತ್ತು. ಈ ಆದೇಶದ ಬೆನ್ನಲ್ಲೇ ಜಿಲ್ಲಾಡಳಿತವು ಜಾಗ ವಶಕ್ಕೆ ಪಡೆದು ಬೇಲಿ ನಿರ್ಮಿಸುವ ಕಾರ್ಯ ಆರಂಭಿಸಿತ್ತು.

ಆದರೆ ಮಾರುಕಟ್ಟೆ ದರ ತುಂಬಾ ದುಬಾರಿಯಾಗಿದ್ದು, ಪುನರ್ ಪರಿಶೀಲಿಸಬೇಕು ಎಂದು ಕೋರಿ ರೆಸಾರ್ಟ್‌ ಮಾಲೀಕರುಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿರುವ ನ್ಯಾಯಾಲಯವು ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದು, ಇದೇ 28ರಂದು ಮತ್ತೆ ವಿಚಾರಣೆ ನಡೆಯಲಿದೆ. ಸದ್ಯ ರೆಸಾರ್ಟ್‌ ಮಾಲೀಕರು ಹಾಗೂ ಜಿಲ್ಲಾಡಳಿತ ಸಹ ಈ ಜಾಗದತ್ತ ಸುಳಿದಿಲ್ಲ. ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಸಹ ಅರ್ಧಕ್ಕೆ ನಿಂತಿದೆ.

ADVERTISEMENT

ಏನಿದು ವಿವಾದ?: ಈಗಲ್‌ಟನ್‌ ರೆಸಾರ್ಟ್‌ ಭೂವಿವಾದ ಎರಡು ದಶಕದಷ್ಟು ಹಳೆಯದು. ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈ. ಲಿ. ಕಂಪನಿಯು 1994ರಲ್ಲಿ ಬಿಡದಿಯ ಸಮೀಪ ಸುಮಾರು 400 ಎಕರೆ ಪ್ರದೇಶದಲ್ಲಿ ಈಗಲ್‌ಟನ್‌ ರೆಸಾರ್ಟ್‌, ಗಾಲ್ಫ್‌ ಅಂಗಳ ಹಾಗೂ ವಿಲ್ಲಾಗಳನ್ನು ನಿರ್ಮಿಸಿತ್ತು.

ಆದರೆ ಹೀಗೆ ನಿರ್ಮಿಸಲಾದ ಜಾಗದಲ್ಲಿ ಸರ್ಕಾರಿ ಗೋಮಾಳ, ರಸ್ತೆ ಮೊದಲಾದ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟ ಜಾಗವೂ ಸೇರಿದೆ ಎಂದು ದೂರುಗಳು ದಾಖಲಾಗಿದ್ದವು. ಇಂತಹ ಪ್ರದೇಶವನ್ನು ತೆರವುಗೊಳಿಸುವಂತೆ 2008ರಲ್ಲಿ ರಾಮನಗರ ತಹಶೀಲ್ದಾರ್ ಕಂಪನಿಗೆ ನೋಟಿಸ್‌ ನೀಡಿದ್ದರು. ನೋಟಿಸ್‌ ಪ್ರಶ್ನಿಸಿ ಚಾಮುಂಡೇಶ್ವರಿ ಕಂಪನಿಯು ಭೂ ನ್ಯಾಯಾಧೀಕರಣ ಹಾಗೂ ಹೈಕೋರ್ಟ್‌ ಮೆಟ್ಟಿಲೇರಿತ್ತು. ಎರಡೂ ಕಡೆ ಅರ್ಜಿದಾರರಿಗೆ ಸೋಲುಂಟಾಗಿತ್ತು. ನಂತರದಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಈಗಲ್‌ಟನ್ ಅತಿಕ್ರಮಿಸಿರುವ ಒಟ್ಟು ಭೂಮಿಯನ್ನು ಪತ್ತೆ ಮಾಡುವಂತೆ ನ್ಯಾಯಾಲಯವು ಸೂಚನೆ ನೀಡಿತ್ತು. ಅದರ ಅನ್ವಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದು, ಸುಮಾರು 106.12 ಎಕರೆ ಅಕ್ರಮ ಪರಭಾರೆ ಮತ್ತು ಒತ್ತುವರಿ ಆಗಿರುವ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದರು.

‘ಅತಿಕ್ರಮಿಸಿದ ಭೂಮಿಗೆ ಪ್ರತಿಯಾಗಿ ಈಗಿನ ಮಾರುಕಟ್ಟೆ ಮೌಲ್ಯದ ದರವನ್ನು ಪಾವತಿಸಿದರೆ ಕಂಪನಿಯು ಜಮೀನನ್ನು ಬಳಕೆ ಮಾಡಬಹುದು’ ಎಂದು ಸುಪ್ರೀಂ ಕೋರ್ಟ್‌ 2014ರಲ್ಲಿ ತೀರ್ಪು ನೀಡಿತ್ತು.

2015ರಲ್ಲಿ ಈಟಲ್‌ಟನ್‌ ಮಾಲೀಕರು 28.33 ಎಕರೆ ಜಮೀನನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದ್ದು, 77.19 ಎಕರೆಯನ್ನು ತಮ್ಮ ವಶದಲ್ಲೇ ಉಳಿಸಿಕೊಂಡಿದ್ದರು. ಈ ಜಮೀನಿಗೆ ಸಂಬಂಧಿಸಿ 2015ರಲ್ಲಿ ರಾಜ್ಯ ಸಚಿವ ಸಂಪುಟ ಉಪಸಮಿತಿಯು ಭೇಟಿ ನೀಡಿ ಮಾರುಕಟ್ಟೆ ದರ ಅಂದಾಜಿಸಿತ್ತು. ಅಂತಿಮವಾಗಿ ಈಗಲ್‌ಟನ್‌ ರೆಸಾರ್ಟ್‌ ಸುತ್ತಮುತ್ತ ನಡೆದ ಭೂ ಖರೀದಿ ಆಧಾರದಲ್ಲಿ 77.19 ಎಕರೆಗೆ ಒಟ್ಟು ₹982 ಕೋಟಿ ದರ ಪಾವತಿಸುವಂತೆ ರಾಮನಗರದ ಅಂದಿನ ಜಿಲ್ಲಾಧಿಕಾರಿ ಅಂದಾಜಿಸಿದ್ದರು. ಈ ದರವನ್ನು ಪ್ರಶ್ನಿಸಿ ಈಗಲ್‌ಟನ್‌ ಮಾಲೀಕರು ಮತ್ತೆ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆದರೆ ನ್ಯಾಯಾಲಯವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

---

ಮಾಲೀಕರ ವಾದವೇನು?

ಸರ್ಕಾರ ಹಾಗೂ ರಾಮನಗರ ಜಿಲ್ಲಾಡಳಿತವು 2011 ಹಾಗೂ ಅದಕ್ಕೂ ಮುನ್ನ ನಿಗದಿಪಡಿಸಿದ್ದ ಮಾರ್ಗಸೂಚಿ ದರದಂತೆ ತಾನು ದಂಡ ವಾಪತಿಸಲು ಸಿದ್ಧವಿರುವುದಾಗಿ ಚಾಮುಂಡೇಶ್ವರಿ ಬಿಲ್ಡ್‌ಟೆಕ್‌ ಕಂಪನಿಯು ನ್ಯಾಯಾಲಯಕ್ಕೆ ತಿಳಿಸಿದೆ. ಒಟ್ಟು ₹12.35 ಕೋಟಿ ಹಣವನ್ನು ಪಾವತಿ ಮಾಡುವುದಾಗಿ ಹೇಳಿದೆ.

---

ಕ್ರೀಡಾಂಗಣ ನಿರ್ಮಾಣಕ್ಕೆ ಉತ್ಸುಕ

77 ಎಕರೆ ಜಾಗ ರಾಮನಗರ ಜಿಲ್ಲಾಡಳಿತದ ವಶವಾದ ಬೆನ್ನಲ್ಲೇ ಕ್ರೀಡಾ ಸಚಿವ ನಾರಾಯಣ ಗೌಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸದರಿ ಜಾಗವನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಕೋರಿದ್ದರು. ಬೆಂಗಳೂರು ಹೊರವಲಯದಲ್ಲಿ ವ್ಯವಸ್ಥಿತ ಕ್ರೀಡಾಂಗಣದ ಅಗತ್ಯ ಇದ್ದು, ಸರ್ಕಾರ ಜಾಗ ನೀಡಿದಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ಆಗುತ್ತದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.