
ರಾಮನಗರ: ‘ಕೂಲಿ ಮಾಡಿರುವವರಿಗೆ ಕೂಲಿ ಕೊಡುವಂತೆ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಮ್ಮ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಕೂಲಿ ಕೊಡಬೇಕು. ಆ ನಿಟ್ಟಿನಲ್ಲಿ ಎರಡ್ಮೂರು ದಿನಗಳಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ. ನಮ್ಮ ನಾಯಕರು ಸಹ ಒಳ್ಳೆಯ ಸುದ್ದಿ ಸಿಗಲಿದೆ ಎಂದಿದ್ದಾರೆ. ಹಾಗಾಗಿ, ನಾವು ಬಹಳ ಖುಷಿಯಾಗಿದ್ದೇವೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಬೆಳವಣಿಗೆಗಳಕ ಬೆನ್ನಲ್ಲೇ ಬುಧವಾರ ನಗರದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ನಡುವೆಯೇ ಬೆಂಗಳೂರಿಗೆ ತುರ್ತಾಗಿ ಹೊರಟ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬೆಂಗಳೂರಿಗೆ ತುರ್ತಾಗಿ ಬರುವಂತೆ ಡಿಸಿಎಂ ಸಾಹೇಬ್ರು ಕರೆದಿದ್ದಾರೆ. ಅಲ್ಲಿ ಶಾಸಕರ ಸಭೆ ಮಾಡುತ್ತಾರೋ ಅಥವಾ ಮಾತುಕತೆ ನಡೆಸುತ್ತಾರೊ ಗೊತ್ತಿಲ್ಲ’ ಎಂದರು.
‘ಸುಮ್ಮನೆ ಓಡಾಡಿರುವವರಿಗೆ ಕೂಲಿ ಕೊಡಲು ಆಗುತ್ತಾ? ಶಿವಕುಮಾರ್ ಅವರು ಪಕ್ಷಕ್ಕಾಗಿ ಬೆವರು ಹರಿಸಿದ್ದಾರೆ. ಹಾಗಾಗಿ, ಅವರಿಗೆ ಕೂಲಿ ಕೊಡಲೇಬೇಕು. ಅವರು ಮತ್ತು ನಾನು ಈ ಜಿಲ್ಲೆಯವರು. ಇಂತಹ ಸಂದರ್ಭದಲ್ಲಿ ನಾನು ಅವರ ಜೊತೆಗಿದ್ದು, ಎಲ್ಲಾ ರೀತಿಯ ಸಹಕಾರ ಕೊಡುವುದು ನನ್ನ ಧರ್ಮ’ ಎಂದು ತಿಳಿಸಿದರು.
‘ನಿನ್ನೆ ದೆಹಲಿಗೆ ಹೋಗಿದ್ದಾಗ ಪಕ್ಷದ ಯಾವ ನಾಯಕರನ್ನೂ ನಾನು ಭೇಟಿ ಮಾಡಿಲ್ಲ. ಕೆಲ ಶಾಸಕರು ಸೇರಿಕೊಂಡು, ಮುಂದೇನು ಮಾಡಬೇಕೆಂಬುದರ ಕುರಿತು ಚರ್ಚಿಸಿ ವಾಪಸ್ ಬಂದಿದ್ದೇವೆ’ ಎಂದು ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.