ADVERTISEMENT

ಸಕಾರಣವಿಲ್ಲದೆ ವರ್ಗಾವಣೆ ಸಲ್ಲದು: ಡಿ. ಶಿವಶಂಕರ್ ಆಕ್ರೋಶ

ನಗರಸಭೆ ಆರ್‌ಐ ವರ್ಗಾವಣೆಗೆ ಎಸ್‌ಸಿ–ಎಸ್‌ಟಿ ನೌಕರರ ಸಮನ್ವಯ ಸಮಿತಿ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 2:39 IST
Last Updated 11 ಜನವರಿ 2026, 2:39 IST
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಮಾತನಾಡಿದರು. ಹಿರಿಯ ಉಪಾಧ್ಯಕ್ಷ ಆರ್. ಮೋಹನ್, ಸ್ವಾಭಿಮಾನ ಸೇವಾ ಸಮಿತಿಯ ಬಸವರಾಜ್ ಇದ್ದಾರೆ
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಮಾತನಾಡಿದರು. ಹಿರಿಯ ಉಪಾಧ್ಯಕ್ಷ ಆರ್. ಮೋಹನ್, ಸ್ವಾಭಿಮಾನ ಸೇವಾ ಸಮಿತಿಯ ಬಸವರಾಜ್ ಇದ್ದಾರೆ   

ರಾಮನಗರ: ನಗರಸಭೆಯ ಕಂದಾಯ ನಿರೀಕ್ಷಕ ಆರ್. ನಾಗರಾಜು ಅವರನ್ನು ಕೇವಲ ಐದೇ ತಿಂಗಳಿಗೆ ಯಾವುದೇ ಕಾರಣವಿಲ್ಲದೆ ವರ್ಗಾವಣೆ ಮಾಡಿರುವ ಪೌರಾಡಳಿತ ಇಲಾಖೆಯು ವರ್ಗಾವಣೆ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಖಂಡನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲವಾದ ಕಾರಣವಿದ್ದಾಗ ಮಾತ್ರ ವರ್ಗಾವಣೆ ಮಾಡಬೇಕು. ಆದರೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರೂ ಆಗಿರುವ ನಾಗರಾಜು ಅವರನ್ನು ಸಕಾರಣವಿಲ್ಲದೆ ಇಲ್ಲಿಂದ 600  ಕಿ.ಮೀ. ದೂರವಿರುವ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಆಡಳಿತದ ಹಿತದೃಷ್ಟಿಯಿಂದ, ಸಾರ್ವಜನಿಕರಿಂದ ದೂರು ಬಂದಾಗ, ತರವಲ್ಲದ ವರ್ತನೆ ತೋರಿದಾಗ, ಭ್ರಷ್ಟಾಚಾರದಡಿ ತನಿಖಾ ಸಂಸ್ಥೆಗಳ ದಾಳಿಯಲ್ಲಿ ಸಿಕ್ಕಿ ಬಿದ್ದಾಗ ಸೇರಿದಂತೆ ವಿವಿಧ ಬಲವಾದ ಕಾರಣಗಳಿದ್ದಾಗ ಮಾತ್ರ ವರ್ಗಾವಣೆ ಮಾಡಬೇಕು. ಆದರೆ, ನಾಗರಾಜು ವಿರುದ್ಧ ಯಾವುದೇ ದೂರುಗಳಿಲ್ಲದಿದ್ದರೂ ಕೇವಲ 5 ತಿಂಗಳು 18 ದಿನಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಸಿ ಗ್ರೂಪ್ ನೌಕರರನ್ನು ಕನಿಷ್ಠ 4 ವರ್ಷದವರೆಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ, ನಾಗರಾಜು ವರ್ಗಾವಣೆಯು ಮೇಲ್ನೊಟಕ್ಕೆ ಶಿಕ್ಷಾರ್ಹ ವರ್ಗಾವಣೆಯಂತಿದೆ. ಪೌರ ಕಾರ್ಮಿಕರ ಪರವಾಗಿ ಅವರ ದನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿರುವುದು ಇದಕ್ಕೆ ಕಾರಣವಿರಬಹುದು. ವರ್ಗಾವಣೆ ಹಿಂದೆ ಯಾರಿದ್ದಾರೆ ಎಂಬುದು ಇಂದಿಗೂ ಕಗ್ಗಂಟಾಗಿದೆ. ಇಲಾಖೆಯು ಕೂಡಲೇ ಅವರ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್. ಮೋಹನ್, ಸ್ವಾಭಿಮಾನ ಸೇವಾ ಸಮಿತಿಯ ಬಸವರಾಜ್‌, ರಾಮನಗರ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.